ಹಾವೇರಿ: ಸಾಮಾನ್ಯವಾಗಿ ಒಂದರಿಂದ ಎರಡು ಲಕ್ಷಕ್ಕೆ ಹೋರಿಗಳು ಮಾರಾಟ ಆಗುವುದನ್ನು ಕೇಳಿದ್ದೇವೆ. ಅಲ್ಲೊಂದು ಇಲ್ಲೊಂದು ಎನ್ನುವಂತೆ ದಾಖಲೆ ಬೆಲೆಗೆ ಹೋರಿ ಮಾರಾಟವಾಗಿದ್ದು ಇದೆ. ಆದರೆ ಹಾವೇರಿ ಜಿಲ್ಲೆಯ ಹೋರಿಯೊಂದು ಬರೋಬ್ಬರಿ 19 ಲಕ್ಷದ 128 ರೂಪಾಯಿಗೆ ಮಾರಾಟವಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ. ಹೋರಿ ಮಾರಾಟ ಮಾಡದಂತೆ ಈಗ ಅಭಿಮಾನಿಗಳು ಪಟ್ಟು ಹಿಡಿದಿರೋದು ಮಾಲೀಕನನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಹಾವೇರಿ ಜಿಲ್ಲೆಯಲ್ಲಿ ಗ್ರಾಮೀಣ ಸೊಗಡಿನ ಕೊಬ್ಬರಿ ಹೋರಿ ಬೆದರಿಸುವ ಕ್ರೀಡೆ ಇಂದಿಗೂ ಸಖತ್ ಫೇಮಸ್. ದೀಪಾವಳಿ ಬಳಿಕ ಜಿಲ್ಲೆಯಲ್ಲಿ ಕೊಬ್ಬರಿ ಹೋರಿ ಸ್ಪರ್ಧೆಯ ಹವಾ ಜೋರಾಗಿರುತ್ತದೆ. ಹೀಗೆ ಕಿಕ್ಕಿರಿದು ಸೇರಿರುವ ಸಾವಿರಾರು ಜನರ ನಡುವೆ ದಿಕ್ಕೆಟ್ಟು ಓಡುವ ಹೋರಿಗಳನ್ನು ನೋಡಲು ಜನ ಮುಗಿ ಬಿಳ್ತಾರೆ. ಈಗ ಅಖಾಡಕ್ಕೆ ಇಳಿದು ಜನರನ್ನು ರಂಜಿಸುತ್ತಿದ್ದ ಹಾವೇರಿಯ ಹೋರಿಯೊಂದು ಲಕ್ಷ ಲಕ್ಷ ಬೆಲೆಗೆ ಮಾರಾಟವಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವಾಸನ ಗ್ರಾಮದ ಮಲ್ಲೇಶಪ್ಪ ಎನ್ನುವವರಿಗೆ ಸೇರಿದ ಹೋರಿ ಈಗ ದಾಖಲೆ ಬೆಲೆಗೆ ವ್ಯಾಪಾರವಾಗಿದೆ. ತಮಿಳುನಾಡಿನ ವೆಲ್ಲೂರ ಜಿಲ್ಲೆಯ ಕಾಟಪಾಡಿಯ ನವೀನ್ ಹೋರಿ ಖರೀದಿಸಿದ್ದು ಆರು ಲಕ್ಷ ಮುಂಗಡ ಹಣವನ್ನು ನೀಡಿದ್ದಾರೆ. ಬ್ರಹ್ಮ ಹೆಸರಿನ ಈ ಹೋರಿ, ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿತ್ತು. ಅಪಾರ ಅಭಿಮಾನಿಗಳನ್ನ ಸೃಷ್ಟಿಸಿಕೊಂಡಿತ್ತು.
ಕೊಬ್ಬರಿ ಹೋರಿ ಸ್ಪರ್ದೆಯ ಅಖಾಡಕ್ಕೆ ಇಳಿದರೆ ಸಾಕು ಅಭಿಮಾನಿಗಳು ಈ ಹೋರಿಯನ್ನ ನೋಡಲು ಮುಗಿಬೀಳುತ್ತಿದ್ದರು. ಸಿಳ್ಳೆ, ಕೇಕೆಯ ಹರ್ಷೋದ್ಘಾರದ ನಡುವೆ ಹೋರಿ ಓಡುವುದನ್ನು ನೋಡಿ ಕುಣಿದು ಕುಪ್ಪಳಿಸುತ್ತಿದ್ದರು. ನಾಲ್ಕು ವರ್ಷದ ಮರಿಯಿದ್ದಾಗ 1 ಲಕ್ಷ 25 ಸಾವಿರ ರೂಪಾಯಿ ಕೊಟ್ಟು ತಮಿಳುನಾಡಿನಿಂದ ಈ ಹೋರಿಯನ್ನು ಖರೀದಿ ಮಾಡಿದ್ದರು. ಕಳೆದ ಮೂರು ವರ್ಷಗಳಿಂದ ಈ ಕುಟುಂಬದವರು ಹೋರಿಯನ್ನ ಸಾಕಿದ್ದರು. ಎಲ್ಲಾ ಹೋರಿಗಳಿಗೆ ನೀಡುವ ಆಹಾರವನ್ನೆ ಈ ಹೋರಿಗೂ ನೀಡುತ್ತಿದ್ದರು. ಹೋರಿ ಮಾಲೀಕರಿಗೆ ಹೋರಿ ಮಾರಲು ಇಷ್ಟವಿರಲಿಲ್ಲ. ಆದರೆ ಈ ಹೋರಿಯನ್ನ ಕೊಡಿಸಿದ್ದ ತಮಿಳುನಾಡಿನ ವೇಣು ಎನ್ನುವವರು ಏಕಾಏಕಿ ಬೆಳ್ಳಂ ಬೆಳಗೆ ಮನೆಗೆ ಬಂದಾಗ ಅನಿವಾರ್ಯವಾಗಿ ಹೋರಿ ಮಾರಿದ್ದಾರೆ. ಈಗ ಹೋರಿ ಮಾರಾಟವಾದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಅಭಿಮಾನಿಗಳು ಗರಂ ಆಗಿದ್ದಾರೆ.
PublicNext
09/08/2022 08:38 am