ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಹೆತ್ತಮ್ಮನನ್ನು ಬಿಟ್ಟು ತೆರಳಿದ ಮಗ; ವೃದ್ಧೆ ಸ್ಥಿತಿ ನೋಡಿ ಮಮ್ಮಲ ಮರುಗಿದ ಜನ

ಕೊಪ್ಪಳ: ತಾಯಿಯೇ ದೇವರು ಎನ್ನುತ್ತಾರೆ. ಆದರೆ, ಇಲ್ಲೊಬ್ಬ ಪುತ್ರ‌ ಎರಡು ದಿನದ ಹಿಂದೆ ತನ್ನ ಹೆತ್ತಮ್ಮನನ್ನೇ ಒಂಟಿಯಾಗಿ ದೇವಸ್ಥಾನದ ಬಳಿ ಬಿಟ್ಟ ತೆರಳಿದ್ದಾನೆ. ಅಜ್ಜಿಯನ್ನು ಹಿರಿಯ ನಾಗರಿಕರ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.

ವೃದ್ಧೆ ತನ್ನ ಹೆಸರು ಖಾಸೀಂ ಬಿ, ತನ್ನದು ಉಜ್ಜಯಿನಿ ಗ್ರಾಮ ಎಂದು ಹೇಳಿಕೊಂಡಿದ್ದಾಳೆ. ಇತರ ವಿವರಗಳನ್ನು ಸರಿಯಾಗಿ ನೀಡಿಲ್ಲ. ಅಜ್ಜಿಯಿಂದ ಹೆಚ್ಚಿನ ವಿವರಗಳಾಗಲಿ ಅಥವಾ ದಾಖಲೆಗಳಾಗಲಿ ದೊರಕಿಲ್ಲ. ಸುಮಾರು 80 ವರ್ಷ ವಯಸ್ಸಾಗಿದೆ. ಎರಡು ದಿನದ ಹಿಂದೆ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಮಗನೊಡನೆ ಬಂದಿದ್ದಾಳೆ. ಮಗ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಹಾಗೂ ತನ್ನ ಮೊಬೈಲ್ ನಂಬರ್ ಇದೆ ಎಂದು ಖಾಲಿ ಹಾಳೆ ಕೈಗಿತ್ತು ತೆರಳಿದ್ದಾನೆನ್ನಲಾಗಿದೆ.

ರಾತ್ರಿಯಾದರೂ ಅಜ್ಜಿ ಬಳಿ ಯಾರೂ ಬರದಿರುವುದನ್ನು ಗಮನಿಸಿದ ಸ್ಥಳೀಯರು ತಿನ್ನಲು ಆಹಾರ ನೀಡಿದ್ದಾರೆ. ಮಲಗಲು ಹಾಸಿಗೆ, ದಿಂಬು ನೀಡಿದ್ದಾರೆ. ಬಳಿಕ ಮೊಬೈಲ್ ಪರಿಶೀಲಿಸಿದಾಗ ಸಿಮ್ ಕಾರ್ಡ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಅಜ್ಜಿ ಯಾರು, ಯಾವ ಊರು ಎಂಬಿತ್ಯಾದಿ ವಿವರ ಸಿಕ್ಕಿಲ್ಲ‌. ಕೂಡಲೇ ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕ್ಷೇತ್ರದ ಪ್ರತಿಕ್ರಿಯೆ ಅಧಿಕಾರಿ ಮುತ್ತಣ್ಣ ಗುದ್ನೆಪ್ಪನವರ್ ಹಾಗೂ ಇತರ ಸಿಬ್ಬಂದಿ ತೆರಳಿ ಅಜ್ಜಿಯನ್ನು ರಕ್ಷಿಸಿದ್ದಾರೆ. ಪೊಲೀಸ್ ಠಾಣೆಗೆ ಮಾಹಿತಿ ನೀಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.

Edited By : Manjunath H D
PublicNext

PublicNext

04/08/2022 05:31 pm

Cinque Terre

51.58 K

Cinque Terre

6