ವಿಜಯವಾಡ: ಜೀವನದಲ್ಲಿ ಏನನಾದರೂ ಸಾಧಿಸಬೇಕು ಎಂದರೆ ಸಾಲದು. ಆ ಸಾಧನೆಗೆ ಬರುವ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಸಾಧಿಸುವುದು ಒಂದು ಚಾಲೆಂಜ್.ಸದ್ಯ ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ 57 ವರ್ಷದ ಎ. ಕೇದಾರೇಶ್ವರ ರಾವ್ ಅವರಿಗೆ ಇದೀಗ ಸರ್ಕಾರಿ ಕೆಲಸ ಒಲಿದು ಬಂದಿದೆ.
ಮೂಲತಃ ಪಥಪಟ್ಟಣ ಮಂಡಲದ ಸೀದಿ ಗ್ರಾಮದ ನಿವಾಸಿಯಾಗಿರುವ ಕೇದಾರೇಶ್ವರ ರಾವ್, ಶ್ರೀಕಾಕುಳಂನಲ್ಲಿ ಸೈಕಲ್ ಮೇಲೆ ಬಟ್ಟೆ ಮಾರಾಟ ಮಾಡುವ ಸ್ವಂತ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. 1998ರಲ್ಲಿ ತಾನು ಎದುರಿಸಿದ್ದ ಜಿಲ್ಲಾ ಆಯ್ಕೆ ಸಮಿತಿ (ಡಿಎಸ್ ಸಿ) ಪರೀಕ್ಷೆಯಲ್ಲಿ ಉತ್ತೀರ್ಣಾರಾಗಿದ್ದ ರಾವ್, ಕಾರಣಾಂತರಗಳಿಂದ 24 ವರ್ಷದ ಬಳಿಕ ಸರ್ಕಾರಿ ಶಿಕ್ಷಕರಾಗಿ ನೇಮಕವಾಗಿದ್ದಾರೆ.
ಇಂಗ್ಲಿಷ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಇಡಿಯನ್ನು ರಾವ್ ಪೂರ್ಣಗೊಳಿಸಿದ್ದಾರೆ.
ಅಂದಹಾಗೆ ಡಿಎಸ್ ಸಿ ಆಂಧ್ರ ಪ್ರದೇಶದಲ್ಲಿ ಸರ್ಕಾರಿ ಶಾಲಾ ಶಿಕ್ಷಕರನ್ನು ನೇಮಕಾತಿಯನ್ನು ನಡೆಸುತ್ತದೆ. ರಾಜ್ಯ ಸರ್ಕಾರ ಇತ್ತೀಚೆಗಷ್ಟೇ 1998ರಲ್ಲಿ ಬಾಕಿ ಉಳಿದಿದ್ದ ಫೈಲ್ ಗಳನ್ನು ತೆರವುಗೊಳಿಸಿತು. ಇದರಿಂದ ಸಾವಿರಾರು ಅಭ್ಯರ್ಥಿಗಳಿಗೆ ಲಾಭವಾಗಿದ್ದು, ಪರೀಕ್ಷೆ ಎದುರಿಸಿದ ಎರಡು ದಶಕಗಳ ಬಳಿಕ ಸರ್ಕಾರಿ ಉದ್ಯೋಗ ದೊರಕಿದೆ.
ಇದೀಗ ರಾಜ್ಯ ಸರ್ಕಾರವು ಡಿಎಸ್ ಸಿ ಕಡತ ತೆರವುಗೊಳಿಸಿರುವುದು ಸಂತಸ ತಂದಿದೆ. ಅವರು ನನಗೆ ಅಪಾಯಿಂಟ್ ಮೆಂಟ್ ನೀಡಿದರೆ ನಾನು ಕರ್ತವ್ಯಕ್ಕೆ ಸೇರಲು ಸಿದ್ಧನಿದ್ದೇನೆ ಎಂದು ಕೇದಾರೇಶ್ವರ ರಾವ್ ಸಂತಸದಿಂದ ಹೇಳಿಕೊಂಡಿದ್ದಾರೆ. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಸಾಮರ್ಥ್ಯವಿರುವ ರಾವ್ ಕಳೆದ ಎರಡು ದಶಕಗಳಿಂದ ಸೈಕಲ್ನಲ್ಲಿ ಒಳ ಉಡುಪು ಮತ್ತು ಶರ್ಟ್ ಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.
PublicNext
22/06/2022 01:15 pm