ಬೆಂಗಳೂರು: ಕೆಲವು ಸಂದರ್ಭಗಳಲ್ಲಿ ನಾವು ಕೇಳಿಕೊಳ್ಳುವ ರೀತಿಯಿಂದ ಸಾಧ್ಯವಾಗದ ಕೆಲಸಗಳು ಸಾಧ್ಯವಾಗುತ್ತವೆ ಎನ್ನುವುದುದಕ್ಕೆ ಇದು ಬೆಸ್ಟ್ ಉದಾಹರಣೆ.
ಹೌದು ಸರ್ಕಾರಿ ಉದ್ಯೋಗದಲ್ಲಿದ್ದ ವ್ಯಕ್ತಿಯೊಬ್ಬರು ಸುದೀರ್ಘ ರಜೆ ಹಾಕಿ ಕೆಲಸದಿಂದ ವಜಾಗೊಂಡಿದ್ದರು. ಆದರೆ ಅಪ್ಪನಿಗೆ ಕೆಲ್ಸ ಕೊಡಿ ಎಂಬ ಇವರ ಪುಟ್ಟ ಪುತ್ರಿಯ ಕೋರಿಕೆಗೆ ಮರುಗಿದ ಹಿರಿಯ ಅಧಿಕಾರಿ, ಪುನಃ ಇವರನ್ನು ಉದ್ಯೋಗಕ್ಕೆ ತೆಗೆದುಕೊಂಡು, ಮುಂದೆ ಅಂಥ ತಪ್ಪು ಮಾಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.
ಮೃದುವಾಗಿ ಮಾತನಾಡಿ ತಂದೆಗೆ ಮರು ಕೆಲಸ ಕೊಡಿಸಿದ ಬಾಲಕಿಯ ಹೆಸರು ಭೂಮಿಕಾ. ಏಳೆಂಟು ವರ್ಷ ವಯಸ್ಸಿನ ಈ ಬಾಲಕಿ ವೈದ್ಯಕೀಯ ಲೋಪದಿಂದ ತನ್ನ ಎಡಗೈಯನ್ನು ಭಾಗಶಃ ಕಳೆದುಕೊಂಡಿದ್ದಾಳೆ.ಈ ಬಾಲಕಿಯ ತಂದೆ ಲೋಕೇಶ್, ಕೆಎಸ್ ಆರ್ ಟಿಸಿಯಲ್ಲಿ ಚಾಲಕ ಮತ್ತು ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದು, ದೀರ್ಘಾವಧಿಯ ಗೈರು ಪ್ರಕರಣದಲ್ಲಿ ಕೆಲಸದಿಂದ ವಜಾಗೊಳಿಸಲ್ಪಟ್ಟಿದ್ದರು. ಪರಿಣಾಮವಾಗಿ ತನ್ನ ಪುತ್ರಿಗೆ ಚಿಕಿತ್ಸೆ ಕೊಡಿಸಲಾಗದೆ, ಜೀವನ ನಡೆಸುವುದಕ್ಕೂ ಕಷ್ಟ ಪಡುತ್ತಿದ್ದರು.
ಹೀಗಾಗಿ ಲೋಕೇಶ್ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರನ್ನು ತನ್ನ ಪುತ್ರಿಯೊಂದಿಗೆ ಕಚೇರಿಗೆ ತೆರಳಿ ಭೇಟಿಯಾಗಿದ್ದರು. ಆಗ ವ್ಯವಸ್ಥಾಪಕ ನಿರ್ದೇಶಕರು, ಭೂಮಿಕಾಳನ್ನು ಮಾತನಾಡಿಸಿ ಅಪ್ಪನಿಗೆ ಕೆಲಸ ಕೊಡಬೇಕಾ? ಎಂದು ಕೇಳಿದರು. ಆಕೆ ನನ್ನ ಅಪ್ಪನಿಗೆ ಕೆಲಸ ಕೊಡಿ ಸರ್ ಎಂದು ಮುಗ್ಧತೆಯಿಂದ ಕೇಳಿದ್ದಕ್ಕೆ ಮರುಗಿದ ಅನ್ಬುಕುಮಾರ್, ಲೋಕೇಶ್ ಗೆ ಮರಳಿ ಕೆಲಸ ಕೊಡಿಸಲು ವ್ಯವಸ್ಥೆ ಮಾಡಿದ್ದಾರೆ.
PublicNext
17/06/2022 10:31 pm