ಬೆಂಗಳೂರು: ಆಟೋ ಚಾಲಕ ನಿರರ್ಗಳ, ಸ್ಪಷ್ಟ ಇಂಗ್ಲಿಷ್ ಮಾತುಗಳನ್ನು ಕೇಳಿದ ಮಹಿಳಾ ಪ್ಯಾಸೆಂಜರ್ ಒಬ್ಬರು ಬೆರಗಾದ ಪ್ರಸಂಗವೊಂದು ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ನಿಖಿತಾ ಅಯ್ಯರ್ ತಮ್ಮ ಹಾಗೂ ಆಟೋ ಚಾಲಕನ ನಡುವೆ ನಡೆದ ಸಂಭಾಷಣೆ ಸೇರಿದಂತೆ ಕೆಲ ಇಂಟರೆಸ್ಟಿಂಗ್ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಹಾಗೂ ಆಟೋ ಚಾಲಕನ ಫೋಟೋ ಸಖತ್ ವೈರಲ್ ಆಗಿದೆ. ಹಾಗಿದ್ದರೆ ಆಗಿದ್ದೇನು? ಯಾರು ಈ ಆಟೋ ಡ್ರೈವರ್ ಅಂತೀರಾ ಇಲ್ಲಿದೆ ನೋಡಿ ಸ್ಟೋರಿ...
ನಿಖಿತಾ ಅಯ್ಯರ್ ತಮ್ಮ ಕಚೇರಿಗೆ ತೆರಳುವ ಸಲುವಾಗಿ ಉಬರ್ ಆಟೋ ಬುಕ್ ಮಾಡಿದ್ದರು. ಆಟೋ ಬಂದು ನಿಲ್ಲುತ್ತಿದ್ದಂತೆ ಆಟೋ ಹತ್ತಿದ ಅವರಿಗೆ ತನಗೆ ನಗರದ ಇನ್ನೊಂದು ಭಾಗದಲ್ಲಿರುವ ನನ್ನ ಕಚೇರಿಯನ್ನು ಆದಷ್ಟು ಬೇಗ ತಲುಪಬೇಕು. ನನಗೆ ಈಗಾಗಲೇ ವಿಳಂಬವಾಗಿದೆ ಎಂದು ನಿಖಿತಾ ಹೇಳುತ್ತಾರೆ. ಇದಕ್ಕೆ ಆಟೋ ಚಾಲಕ ದಯವಿಟ್ಟು ಬನ್ನಿ, ನಿಮಗೆಷ್ಟು ಸಾಧ್ಯವೋ ಅಷ್ಟು ಹಣ ನೀಡಿ ಎಂದು ಇಂಗ್ಲೀಷ್‌ನಲ್ಲೇ ಉತ್ತರಿಸುತ್ತಾರೆ. ಇವರ ಇಂಗ್ಲೀಷ್ ನೋಡಿ ಶಾಕ್ ಆದ ನಿಖಿತಾ ಆಟೋದಲ್ಲಿ ತನ್ನ ಕಚೇರಿ ತಲುಪವವರೆಗೂ ಅವರಲ್ಲಿ ಮಾತನಾಡಿದ್ದು, ಅದನ್ನು ತಮ್ಮ ಲಿಂಕ್ಡಿನ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಆಟೋ ಚಾಲಕ, 74 ವರ್ಷದ ಪಟ್ಟಾಬಿ ರಾಮನ್ ಅವರು ಈ ಹಿಂದೆ ಇಂಗ್ಲೀಷ್ ಲೆಕ್ಚರರ್ ಆಗಿದ್ದು, ಈಗ ಜೀವನೋಪಾಯಕ್ಕಾಗಿ ಆಟೋ ಓಡಿಸುತ್ತಿದ್ದಾರೆ. ಅವರ ಸರಳ ಹಾಗೂ ಸ್ವಾಭಿಮಾನದ ಜೀವನಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ನಿಕಿತಾ ಅಯ್ಯರ್ ಅವರ ಲಿಂಕ್ಡಿನ್ ಪೋಸ್ಟ್ ವಿವರ ಇಲ್ಲಿದೆ ಮುಂದೆ ಓದಿ.
ಇಂದು ಬೆಳಗ್ಗೆ ನಾನು ಕೆಲಸಕ್ಕೆ ಮನೆಯಿಂದ ಹೊರಟ್ಟಿದ್ದೆ. ಈ ವೇಳೆ ನ್ನ ಮುಖದಲ್ಲಿದ್ದ ಚಿಂತೆಯನ್ನು ನೋಡಿ ಒಬ್ಬರು ವಯಸ್ಸಾದ ಆಟೋ ಚಾಲಕರು ಎಲ್ಲಿಗೆ ಹೋಗಬೇಕು ಎಂದು ಕೇಳಿದರು. ಮೊದಮೊದಲು ಸಂದೇಹಗೊಂಡ ನಾನು ನಗರದ ಇನ್ನೊಂದು ತುದಿಯಲ್ಲಿರುವ ನನ್ನ ಕಚೇರಿಯನ್ನು ತಲುಪಬೇಕೆಂದು ಆಟೋ ಡ್ರೈವರ್‌ಗೆ ಹೇಳಿದೆ ಮತ್ತು ತಡವಾಗಿದ್ದರಿಂದ ಓಡುತ್ತಿದ್ದೆ. ಆದರೆ ಡ್ರೈವರ್ ಆತ ದಯವಿಟ್ಟು ಬನ್ನಿ ಎಂದು ಇಂಗ್ಲಿಷ್‌ನಲ್ಲಿ ಉತ್ತರಿಸಿದ್ದು ನೋಡಿ ನನಗೆ ಅಚ್ಚರಿ ಆಗಿತ್ತು. ಹೀಗೆ ಆಟೋ ಹತ್ತಿದ ಆಕೆಗೆ ಉಳಿದ 45 ನಿಮಿಷಗಳು ಕಳೆದಿದ್ದೆ ತಿಳಿದಿಲ್ಲ.
ನನ್ನ ಕುತೂಹಲವನ್ನು ತಡೆಯಲಾರದೆ, ಚಾಲಕನಲ್ಲಿ ಇಷ್ಟು ಒಳ್ಳೆಯ ಇಂಗ್ಲಿಷ್ ಹೇಗೆ ಮಾತನಾಡುತ್ತೀರಿ ಎಂದು ಕೇಳಿದೆ. ಆ ವ್ಯಕ್ತಿ ತಾನು ಮುಂಬೈ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕನಾಗಿದ್ದೆ ಮತ್ತು ಎಂಎ ಮತ್ತು ಎಂಇಡ್ ಮಾಡಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಹಾಗಾದರೆ ನಾನು ಆಟೋವನ್ನು ಏಕೆ ಓಡಿಸುತ್ತಿದ್ದೇನೆ ಎಂದು ನೀವು ನನ್ನನ್ನು ಕೇಳಲಿದ್ದೀರಿ ಅಲ್ಲವೇ ಎಂದು ಅವರೇ ಅಯ್ಯರ್ ಅವರು ಕೇಳಬೇಕಾಗಿದ್ದ ಪ್ರಶ್ನೆಯನ್ನು ಕೇಳಿದ್ದಾರೆ.
ಇದಕ್ಕೆ ಅಯ್ಯರ್ ಅವರ ಸಕಾರಾತ್ಮಕ ಪ್ರತಿಕ್ರಿಯೆ ಬಂದ ನಂತರ ಆಟೋ ಚಾಲಕ ತನ್ನ ಜೀವನದ ಬಗ್ಗೆ ತೆರೆದಿಟ್ಟಿದ್ದಾರೆ. ತನ್ನ ಹೆಸರು ಪಟ್ಟಬಿ ರಾಮನ್ ಎಂದು ತಾನು ಕಾಲೇಜು ಉಪನ್ಯಾಸಕ ಹುದ್ದೆಯಿಂದ ನಿವೃತ್ತರಾದಾಗಿನಿಂದ ಅಂದರೆ 14 ವರ್ಷಗಳಿಂದ ಆಟೋ ಓಡಿಸುತ್ತಿರುವುದಾಗಿ ಹೇಳಿದರು. ಆಗ ಕರ್ನಾಟಕದಲ್ಲಿ ಯಾವುದೇ ಉದ್ಯೋಗ ಸಿಗದ ಕಾರಣ ಮುಂಬೈನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿದ್ದೇನೆ ಎಂದು ರಾಮನ್ ಬಹಿರಂಗಪಡಿಸಿದರು.
ಉದ್ಯೋಗಕ್ಕಾಗಿ ಅಲೆದ ಅವರಿಗೆ ಕೇಳಿದ ಒಂದೇ ಒಂದು ಪ್ರಶ್ನೆ, 'ನಿಮ್ಮ ಜಾತಿ ಯಾವುದು?' ಮತ್ತು ಅವರು ತಮ್ಮ ಹೆಸರನ್ನು ಪಟ್ಟಾಬಿ ರಾಮನ್ ಎಂದು ಹೇಳಿದಾಗ, ಅವರು, 'ನಾವು ನಿಮಗೆ ತಿಳಿಸುತ್ತೇವೆ' ಎಂದು ಹೇಳುತ್ತಿದ್ದರು ಎಂದು ಅಯ್ಯರ್ ಬರೆದಿದ್ದಾರೆ.
ಕರ್ನಾಟಕದ ಕಾಲೇಜುಗಳಿಂದ ಅವರು ಪಡೆದ ಈ ಪ್ರತಿಕ್ರಿಯೆಯಿಂದ ಬೇಸರಗೊಂಡ ರಾಮನ್ ಅವರು ಮಹಾರಾಷ್ಟ್ರದ (Maharashtra) ಮುಂಬೈಗೆ (Mumbai)ತೆರಳಿದರು, ಅಲ್ಲಿ ಅವರು ಪ್ರತಿಷ್ಠಿತ ಕಾಲೇಜಿನಲ್ಲಿ ಉದ್ಯೋಗವನ್ನು ಕಂಡುಕೊಂಡರು. ಅವರು 20 ವರ್ಷಗಳ ಕಾಲ ಪೊವೈನಲ್ಲಿರುವ ಕಾಲೇಜಿನಲ್ಲಿ ಕೆಲಸ ಮಾಡಿ 60 ನೇ ವಯಸ್ಸಿನಲ್ಲಿ ನಿವೃತ್ತರಾದರು ಮತ್ತು ಕರ್ನಾಟಕದ ಬೆಂಗಳೂರಿಗೆ ಮರಳಿದರು.
ಶಿಕ್ಷಕರಿಗೆ ಸರಿಯಾಗಿ ಸಂಬಳವಿಲ್ಲ. ನೀವು ಗರಿಷ್ಠ 10 ರಿಂದ 15,000 ಗಳಿಸಬಹುದು ಮತ್ತು ಅದು ಖಾಸಗಿ ಸಂಸ್ಥೆಯಾಗಿದ್ದರಿಂದ ನನಗೆ ಪಿಂಚಣಿ ಇಲ್ಲ. ರಿಕ್ಷಾ ಓಡಿಸುವ ಮೂಲಕ ನಾನು ದಿನಕ್ಕೆ ಕನಿಷ್ಠ 700-1500/- ಪಡೆಯುತ್ತೇನೆ. ನನಗೆ ಮತ್ತು ನನ್ನ ಗೆಳತಿಗೆ(ಗರ್ಲ್‌ಫ್ರೆಂಡ್) ಇದು ಸಾಕು ಎಂದು ಅವರು ನಗುತ್ತಾ ಹೇಳಿದರು.
ಅವರ ಬಾಯಲ್ಲಿ ಗರ್ಲ್‌ಫ್ರೆಂಡ್ ಪದ ಕೇಳಿ ಅಯ್ಯರ್ ಕೂಡ ನಕ್ಕಾಗ ತಾನು ತನ್ನ ಪತ್ನಿಯನ್ನು ಗರ್ಲ್‌ಫ್ರೆಂಡ್ ಎಂದು ಕರೆಯುವುದಾಗಿ ಹೇಳಿದರು. ಅಲ್ಲದೇ ತಮಗೊಬ್ಬ ಪುತ್ರನಿದ್ದು, ಆತ ತಮ್ಮ ಮನೆಯ ಬಾಡಿಗೆಯನ್ನು ಕಟ್ಟುತ್ತಾನೆ. ಆದರಾಚೆಗೆ ನಾವು ಆತನಿಂದ ಏನನ್ನು ಬಯಸುತ್ತಿಲ್ಲ. ಅವರು ಅವರ ಜೀವನವನ್ನು ನಡೆಸುತ್ತಿದ್ದಾರೆ. ನಾವು ನಮ್ಮ ಜೀವನವನ್ನು ಖುಷಿಯಿಂದ ನಡೆಸುತ್ತಿರುವುದಾಗಿ ಹೇಳಿದರು.
PublicNext
30/03/2022 12:58 pm