ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

6ನೇ ಕ್ಲಾಸ್‌ನಲ್ಲಿ ಶಾಲೆ​​ ಬಿಟ್ಟವನು ಈಗ ಕಂಪನಿಯೊಂದರ ಸಿಇಒ: ಇದು ಕಥೆಯಲ್ಲ ನಿಜ.!

ಎಷ್ಟೇ ಕಷ್ಟ ಬಂದರೂ ಗುರಿಯ ಕಡೆಗೆ ಏಕಾಗ್ರತೆಯಿಂದ ಹೆಜ್ಜೆ ಇಟ್ಟರೆ ಯಾವ ಸ್ಥಾನಕ್ಕೆ ಬೇಕಾದರೂ ಏರಬಹುದು. ಇದಕ್ಕೆ ಇಲ್ಲೊಬ್ಬರು ಸಾಕ್ಷಿಯಾಗಿದ್ದಾರೆ.

ಹೌದು. ಕೇರಳದ ದೂರದ ಹಳ್ಳಿಯ ದಿನಗೂಲಿ ಕೆಲಸಗಾರನ ಮಗನಾದ ಮುಸ್ತಫಾ ಪಿ.ಸಿ. 6ನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ನಂತರ ಶಾಲೆಯಿಂದ ಹೊರಗುಳಿಯಲು ನಿರ್ಧರಿಸಿದರು. ಅಲ್ಲದೆ ತಂದೆಯ ಜತೆ ಜಮೀನಿನಲ್ಲಿ ಕೆಲಸ ಮಾಡುವ ನಿರ್ಧಾರ ಮಾಡಿದ್ದರು. ಅದೇ ವ್ಯಕ್ತಿ ಈಗ ವರ್ಷಗಳ ನಂತರ ಐಡಿ (iD) ಫ್ರೆಶ್ ಫುಡ್‌ನ ಸಿಇಒ ಆಗಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಮುಸ್ತಫಾ ಅವರು, "ನನ್ನ ಶಿಕ್ಷಕರು ಶಾಲೆಗೆ ಮರಳಲು ನನಗೆ ಮನವರಿಕೆ ಮಾಡಿದರು. ಅಲ್ಲದೆ ಅವರು ನನಗೆ ಉಚಿತವಾಗಿ ಬೋಧಿಸಿದರು. ಅವರ ಕಾರಣದಿಂದಾಗಿ, ನಾನು ನನ್ನ ತರಗತಿಯಲ್ಲಿ ಗಣಿತದಲ್ಲಿ ಅಗ್ರಸ್ಥಾನ ಪಡೆದಿದ್ದೆ. ಅದು ನನ್ನನ್ನು ಕಷ್ಟಪಟ್ಟು ಅಧ್ಯಯನ ಮಾಡಲು ಪ್ರೇರೇಪಿಸಿತು ಮತ್ತು ನಾನು ಶಾಲೆಯ ಟಾಪರ್ ಆಗಿದ್ದೆ. ನಂತರ ನನ್ನ ಶಿಕ್ಷಕರು ಒಟ್ಟಾಗಿ ಬಂದು ನನ್ನ ಕಾಲೇಜು ಶುಲ್ಕವನ್ನು ಪಾವತಿಸಿದರು'' ಎಂದು ತನ್ನ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಮುಸ್ತಫಾ ಭಾರತದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಅಂತಿಮವಾಗಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದರು. ಅಲ್ಲಿ ಅವರು ತನ್ನ ತಂದೆಯ ಸಾಲವನ್ನು ಕೇವಲ 2 ತಿಂಗಳಲ್ಲಿ ತೀರಿಸಲು ಸಾಕಷ್ಟು ಸಂಪಾದಿಸಿದರು. ಉತ್ತಮ ಸಂಬಳದ ಕೆಲಸದ ಹೊರತಾಗಿಯೂ, ವ್ಯವಹಾರವನ್ನು ಪ್ರಾರಂಭಿಸಲು ಬಯಸಿದ್ದರು. ಈ ಹಿನ್ನೆಲೆ ಕಳಪೆ ಗುಣಮಟ್ಟದ ಇಡ್ಲಿ-ದೋಸೆ ಹಿಟ್ಟಿನ ಬಗ್ಗೆ ಗ್ರಾಹಕರು ದೂರು ನೀಡಿದ ನಂತರ ಆತನ ಸೋದರಸಂಬಂಧಿಯೊಬ್ಬರು ಉತ್ತಮ ಗುಣಮಟ್ಟದ ಇಡ್ಲಿ-ದೋಸೆ ಹಿಟ್ಟಿನ ಕಂಪನಿ ಆರಂಭಿಸುವ ಐಡಿಯಾ ನೀಡಿದರು. ಅವರು ಕಂಪನಿಯಲ್ಲಿ ಆರಂಭದಲ್ಲಿ 50,000 ರೂ. ಹೂಡಿಕೆ ಮಾಡಿದರು ಮತ್ತು ಅವರ ಸೋದರಸಂಬಂಧಿಗಳು ಅದನ್ನು ನಡೆಸಲು ಅವಕಾಶ ನೀಡಿದರು ಎಂಬುದನ್ನೂ ತನ್ನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಉದ್ಯಮಿ ಮುಸ್ತಫಾ.

ಆದರೂ, ಮೂರು ವರ್ಷಗಳ ನಂತರ ಅವರು ತನ್ನ ಪೂರ್ಣ ಸಮಯವನ್ನು ಕಂಪನಿಯಲ್ಲಿ ಹೂಡಿಕೆ ಮಾಡಬೇಕೆಂದು ಅರಿತುಕೊಂಡರು. ಆದ್ದರಿಂದ ಅವರು ತನ್ನ ಕೆಲಸ ಬಿಟ್ಟು ಭಾರತಕ್ಕೆ ಮರಳಿದರು. ಅಲ್ಲದೆ, ಈ ಕಂಪನಿ ನನ್ನ ಕೈ ಹಿಡಿಯದಿದ್ದರೆ ಬೇರೆ ಒಳ್ಳೆಯ ಕೆಲಸ ಹುಡುಕುತ್ತೇನೆಂದು ಅವರು ತನ್ನ ಹೆತ್ತವರಿಗೆ ಭರವಸೆ ನೀಡಿದರು. ಇನ್ನು, ಕಂಪನಿ ನಡೆಸೋದು ಅಷ್ಟು ಸುಲಭನಾ..? ಕಷ್ಟ ಪಡಲೇಬೇಕಲ್ವ. ಅದೇ ರೀತಿ, ಅವರಿಗೂ ಕಂಪನಿಯ ಕೆಲಸ ಅಷ್ಟು ಸುಲಭವಾಗಿರಲಿಲ್ಲ ಮತ್ತು ಅವರು ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು.

ತಮ್ಮ ಉದ್ಯೋಗಿಗಳಿಗೆ ಸಂಬಳ ನೀಡಲು ಸಾಧ್ಯವಾಗದ ದಿನಗಳು ಇದ್ದವು ಎಂಬುದನ್ನು ಸಂದರ್ಶನದಲ್ಲಿ ನೆನಪಿಸಿಕೊಂಡರು ಮುಸ್ತಫಾ. ಆದರೆ ಕಂಪನಿಯು ಯಶಸ್ವಿಯಾದ ನಂತರ ಎಲ್ಲ 25 ಜನ ಉದ್ಯೋಗಿಗಳನ್ನು ಮಿಲಿಯನೇರ್‌ಗಳನ್ನಾಗಿ ಮಾಡುತ್ತೇನೆಂದು ಭರವಸೆ ನೀಡಿದ್ದೆ ಹಾಗೂ ಕಂಪನಿಯ ಷೇರುಗಳನ್ನು ನೀಡಿದ್ದೆ. ಎಂಟು ವರ್ಷಗಳ ಹೋರಾಟದ ನಂತರ, ಅವರು ಹೂಡಿಕೆದಾರರನ್ನು ಕಂಡುಕೊಂಡರು ಮತ್ತು ಐಡಿ ಫ್ರೆಶ್ ಫುಡ್ 2000 ಕೋಟಿ ರೂ. ಮೌಲ್ಯದ ಕಂಪನಿ ಎನಿಸಿಕೊಂಡಿದೆ. ಈ ಮೂಲಕ ಉದ್ಯೋಗಿಗಳಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ ಮುಸ್ತಫಾ.

ಈಗ ಉದ್ಯಮಿ ಮುಸ್ತಫಾ ತನ್ನ ಯಶಸ್ಸಿಗೆ ಸ್ಪೂರ್ತಿ ತನ್ನ ಶಿಕ್ಷಕರೆಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟು ವರ್ಷಗಳ ಹಿಂದೆ ಎಂದಿಗೂ ಬಿಟ್ಟುಕೊಡದಂತೆ ಸ್ಫೂರ್ತಿ ನೀಡಿದ ಎಲ್ಲಾ ಶಿಕ್ಷಕರೂ ಈ ಯಶಸ್ಸಿಗೆ ಕಾರಣ. ಆದರೆ, ಅವರು ನನ್ನ ಯಶಸ್ಸನ್ನು ನೋಡದ್ದಕ್ಕೆ ತನ್ನ ಬಗ್ಗೆ ಪಶ್ಚಾತಾಪವನ್ನೂ ಪಟ್ಟರು ಮುಸ್ತಫಾ. "ನಾನು ನನ್ನ ಯಶಸ್ಸನ್ನು ನನ್ನ ಶಿಕ್ಷಕರೊಂದಿಗೆ ಹಂಚಿಕೊಳ್ಳಲು ಬಯಸಿದ್ದೆ, ಆದರೆ ನಾನು ಮನೆಗೆ ಹಿಂದಿರುಗಿದಾಗ, ಅವರು ತೀರಿಕೊಂಡರೆಂದು ನನಗೆ ತಿಳಿಯಿತು. ನಾನು ಎದೆಗುಂದಿದ್ದೆ ಮತ್ತು ಯೋಚಿಸಿದೆ, ‘ಒಬ್ಬ ಕಾರ್ಮಿಕ ತನ್ನಿಂದ ಏನನ್ನು ಸಾಧಿಸಿದನೆಂದು ಸರ್ ನೋಡಿದ್ದರೆ!’ಈಗ, ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಾನು ಅವರ ಪರಂಪರೆಯನ್ನು ಗೌರವಿಸಲು, ಅವರ ಬಗ್ಗೆ ಮಾತನಾಡುತ್ತೇನೆ'' ಎಂದೂ ಹ್ಯೂಮನ್ಸ್ ಆಫ್‌ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ಮುಸ್ತಫಾ ಹೇಳಿದ್ದಾರೆ.

Edited By : Vijay Kumar
PublicNext

PublicNext

02/09/2021 05:44 pm

Cinque Terre

31.15 K

Cinque Terre

2