ವರದಿ: ರಹೀಂ ಉಜಿರೆ
ಮಲ್ಪೆ ; ಉಸಿರು ನಿಂತ ಬಳಿಕವೂ ಹೆಸರು ಉಳೀಬೇಕು ಅಂದರೆ ಒಳ್ಳೆಯ ಕೆಲಸ ಮಾಡಿರಬೇಕು. ಇಲ್ಲಿ ಐದು ತಿಂಗಳ ಕಂದಮ್ಮನ ಉಸಿರು ಶಾಶ್ವತವಾಗಿ ನಿಂತಿದ್ದರೂ, ತಂದೆ ತಾಯಿಯ ಔದಾರ್ಯ ಮಗುವಿನ ಹೆಸರನ್ನು ಶಾಶ್ವತವಾಗಿಸಿದೆ. ತನ್ನ ಕಂದನನ್ನು ಉಳಿಸುವ ಹೋರಾಟದಲ್ಲಿ ಒಟ್ಟಾದ ಹಣವನ್ನು ಸ್ವಲ್ಪವೂ ಇಟ್ಟುಕೊಳ್ಳದೇ, ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸಿದ ಈ ಹೆತ್ತವರ ಸಾಮಾಜಿಕ ಕಳಕಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕಳೆದ ತಿಂಗಳು ಉಡುಪಿ ಜಿಲ್ಲೆಯ ಪುಟ್ಟ ಮಗುವೊಂದಕ್ಕೆ ಜಗತ್ತಿನ ಅಪರೂಪದ ಸ್ಪೈನಲ್ ಮಸ್ಕುಲರ್ ಆಟ್ರೋಫಿ (ಎಸ್ಎಂಎ) ಅಂದರೆ, ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಕಾಯಿಲೆ ವಕ್ಕರಿಸಿ ಇಂಜೆಕ್ಷನ್‌ಗೆ 16 ಕೋಟಿ ಹಣದ ಅವಶ್ಯಕತೆ ಇದೆ ಎನ್ನುವ ಸುದ್ದಿ ನಿಮಗೂ ಗೊತ್ತಿರಬಹುದು. ಎಳೆಯ ಕಂದನ ಜೀವ ಉಳಿಸಲು ಹಲವು ಹೃದಯವಂತರು ಸಹಾಯ ಕೂಡ ಮಾಡಿದ್ದರು.ಆದರೆ ದುರಾದೃಷ್ಟವಶಾತ್ ಮಗು ಲಕ್ಷಾಂತರ ಜನರ ಪ್ರಾರ್ಥನೆ ಸಾಕಾರಗೊಳ್ಳದೆ ಇಹಲೋಕ ತ್ಯಜಿಸಿತ್ತು. ಆದರೆ ಮಗುವಿಗಾಗಿ ದಾನಿಗಳು ಲಕ್ಷಾಂತರ ರೂ ಹಣ ದೇಣಿಗೆ ನೀಡಿದ್ದರು. ಮಗುವಿನ ಮರಣದ ನಂತರ ಈ ಹಣ ಎಲ್ಲಿಗೆ ಹೋಯ್ತು, ಏನು ಮಾಡಿದ್ರು ಎಂದು ಜನ ಕೇಳೋದು ಸಹಜ. ಒಂದಷ್ಟು ಅಪಪ್ರಚಾರ ಕೂಡ ಆಯ್ತು. ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದ ಐದು ತಿಂಗಳ ಮಗು ಮಿಥಾನ್ಶ್ ತಂದೆ ಸಂದೀಪ್ ದೇವಾಡಿಗ ತನ್ನ ಬಳಿ ಸ್ವಲ್ಪವೂ ಉಳಿಸಿಕೊಳ್ಳದೇ ಎಲ್ಲವನ್ನೂ ತನಗೆ ಸಮಾಜ ಏನು ಹಣ ನೀಡಿತ್ತೋ ಅದೇ ಸಮಾಜದ ಒಳಿತಿಗಾಗಿ ಹಣವನ್ನು ವಿನಿಯೋಗಿಸಿದ್ದಾರೆ.
ಒಟ್ಟಾದ 38 ಲಕ್ಷ ಹಣದಿಂದ ಮಲ್ಪೆಯಲ್ಲಿ ಜೀವರಕ್ಷಕರೊಬ್ಬರಿಗೆ ಅಗತ್ಯವಿದ್ದ ಆಂಬ್ಯುಲೆನ್ಸ್ ನೀಡಲಾಯಿತು.ಇನ್ನು 18 ಜನ ಅನಾರೋಗ್ಯ ಪೀಡಿತ ಬಡವರ ಚಿಕಿತ್ಸೆಯ ವೆಚ್ಚಕ್ಕೆ ಅಂತ ದೇಣಿಗೆಯ ಹಣವನ್ನು ವಿನಿಯೋಗಿಸಲಾಯಿತು. ಸತ್ಯದ ತುಳುವೆರ್ ಸಂಘಟನೆ ಮೂಲಕ ಒಟ್ಟಾದ ಹಣವನ್ನು ಈ ರೀತಿಯಲ್ಲಿ ಉತ್ತಮ ಕಾರ್ಯಕ್ಕೆ ಸದುಪಯೋಗ ಮಾಡಿದ ಸಂದೀಪ್ ದೇವಾಡಿಗ ಅವರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.ಮಲ್ಪೆಯಲ್ಲಿ ಇದರ ಹಸ್ತಾಂತರ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು.
ತನ್ನ ಕರುಳ ಬಳ್ಳಿಯನ್ನು ಉಳಿಸಿಕೊಳ್ಳಲಾಗದಿದ್ದರೂ ಕಂದಮ್ಮನ ಜೀವ ರಕ್ಷಿಸುವ ಹೋರಾಟದಲ್ಲಿ ಜೊತೆಗಿದ್ದ ಸಮಾಜವನ್ನು ಮರೆಯದೇ, ಒಟ್ಟುಗೂಡಿದ ಹಣವನ್ನು ಈ ರೀತಿಯಲ್ಲಿ ವಿನಿಯೋಗ ಮಾಡಿದ್ದು ಮಾದರಿ ಕೆಲಸವೇ ಸರಿ.
PublicNext
17/08/2021 07:14 pm