ಉಡುಪಿ: ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಎಂಬ ಜಗತ್ತಿನ ಅಪರೂಪದ ಕಾಯಿಲೆಗೆ ತುತ್ತಾಗಿದ್ದ ಉಡುಪಿಯ ಐದು ತಿಂಗಳ ಮಗು ಚಿಕಿತ್ಸೆಗೆ ಸ್ಪಂದಿಸದೇ ಇಂದು ಕೊನೆಯುಸಿರೆಳೆದಿದೆ. ಕಾರ್ಕಳ ತಾಲೂಕಿನ ಬೆಳ್ಮಣ್ ಎಂಬಲ್ಲಿಯ ಐದು ತಿಂಗಳ ಮಿಥಾನ್ಶ್ ದೇವಾಡಿಗ ಎಂಬ ಮಗು, ಜನಿಸಿ ಒಂದೂವರೆ ತಿಂಗಳಾಗಿದ್ದಾಗ ಅನಾರೋಗ್ಯಕ್ಕೆ ತುತ್ತಾಗಿತ್ತು. ಉಡುಪಿಯ ಸರಕಾರಿ ಬಿ.ಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಇದೊಂದು ಅಪರೂಪದ ಕಾಯಿಲೆ, ಬೇರೆ ಕಡೆ ಕರೆದುಕೊಂಡು ಹೋಗಿ ಎಂದು ಹೇಳಿದ್ದರು. ನಂತರ ಮುಂಬೈನ ಹಿಂದೂಜಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಜ್ಞರಿಗೆ ಮಗುವನ್ನು ತೋರಿಸಿದಾಗ ಹಾರ್ಮೋನ್ ವ್ಯತ್ಯಾಸದಿಂದ ಉಂಟಾಗುವ ಸ್ಪೈನಲ್ ಮಸ್ಕುಲರ್ ಆಟ್ರೋಫಿ (ಎಸ್ಎಂಎ) ಅಂದರೆ ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಎಂಬ ಅಪರೂಪದ ಕಾಯಿಲೆಗೆ ಇರೋದು ಗೊತ್ತಾಗಿದೆ. ಮಿಥಾನ್ಶ್ ಎಲ್ಲರಂತೆ ಆರೋಗ್ಯವಾಗಿರಲು ಹೊರ ದೇಶದಿಂದ 16 ಕೋಟಿಯ
ಇಂಜೆಕ್ಷನ್ ತರಬೇಕು ಅಂತ ವೈದ್ಯರು ಹೇಳಿದ್ದರು..
ಪೋಷಕರು ಕಂದನನ್ನು ಉಳಿಸಲು ಕ್ರೌಂಡ್ ಪಂಡಿಂಗ್ ಮೊರೆ ಹೋಗಿ ಹಣ ಹೊಂದಿಸುತ್ತಿದ್ದರು.ದುರದೃಷ್ಟವಶಾತ್ ಮಿಥಾನ್ಶ್ ದೇವಾಡಿಗ ಇಂದು ಕೊನೆಯುಸಿರೆಳೆದಿದ್ದಾನೆ.
PublicNext
29/07/2021 09:30 pm