2 ವರ್ಷದ ಹಿಂದೆ ಎಂದಿನಂತೆ ಕರ್ತವ್ಯಕ್ಕೆ ಅಣಿಯಾಗಲು ಹೊರಟ ನಮ್ಮ ಸೈನಿಕರು ತಮ್ಮೂರಿನಿಂದ ಪ್ರಯಾಣ ಆರಂಭಿಸಿದರು. ಮಡದಿ, ಮಕ್ಕಳು,ಹೆತ್ತವರನ್ನು ಬಿಟ್ಟು ದೇಶ ರಕ್ಷಣೆಗಾಗಿ ಹೊರಟವರು ದುರಂತ ಅಂತ್ಯ ಕಂಡಿದ್ದು ಮಾತ್ರ ಎಂದಿಗೂ ಮರೆಯುವಂತಿಲ್ಲ.
ಅಂದಿನ ಘಟನೆ ನೆನೆದರೆ ಇಂದಿಗೂ ಕರುಳು, ಹಿಂಡಿದಂತಾಗುತ್ತದೆ. ಮದುವೆಗೆ ಬರುತ್ತೇನೆ,ಗೃಹಪ್ರವೇಶಕ್ಕೆ ಬರುತ್ತೇನೆ,ಮಗುಹುಟ್ಟಿದ ಬಳಿಕ ಬರುತ್ತೇನೆ,ಸದ್ಯದಲ್ಲಿಯೇ ಮತ್ತೆ ಬರುತ್ತೇನೆ ಎಂದು ತಮ್ಮವರಿಗೆ ಹೇಳಿ ಹೋದ ಯೋಧರು ಮರಳಿಬಾರದ ಲೋಕಕ್ಕೆ ಹೊರಟು ಹೋದರು.
ಹತ್ತಾರು ಕನಸುಗಳ ಮೂಟೆ ಹೊತ್ತು ಸಾಗಿದ ವೀರ ಯೋಧರು ನಮ್ಮೆದುರಿಗೆ ಇಲ್ಲಾ ಎನ್ನುವ ಸಂಗತಿಯನ್ನು ಯಾರೊಬ್ಬರು ಒಪ್ಪಲು ಸಾಧ್ಯವಿಲ್ಲ..ವೀರ ಯೋಧರನ್ನು ಕಳೆದುಕೊಂಡು ಅಂದು ಇಡೀ ವಿಶ್ವವೇ ಕಣ್ಣೀರು ಸುರಿಸಿದೆ. ಆ ಕರಾಳ ದಿನಕ್ಕೆ ಇಂದಿಗೆ 2 ವರ್ಷ.
ಫೆಬ್ರವರಿ 14, 2019. ಅಂದ್ರೆ ಇಂದಿಗೆ ಎರಡು ವರ್ಷಗಳ ಹಿಂದೆ ಇಡೀ ದೇಶ ಪ್ರೇಮಿಗಳ ದಿನದ ಸಂಭ್ರಮದಲ್ಲಿದ್ದರೆ ಅಲ್ಲೊಂದು ಘನಘೋರ ದುರಂತ ನಡೆದುಹೋಗಿತ್ತು. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೇ ಮೊಹಮ್ಮದ್ ಗೆ ಸೇರಿದ್ದ ಅದಿಲ್ ಅಹ್ಮದ್ ದಾರ್ ಅನ್ನೋ ದುರುಳ ಸಿಆರ್ ಪಿಎಫ್ ಯೋಧರು ಸಂಚರಿಸುತ್ತಿದ್ದ ಬಸ್ ಗೆ ಆರ್ ಡಿಎಕ್ಸ್ ತುಂಬಿದ್ದ ಕಾರನ್ನ ಡಿಕ್ಕಿ ಹೊಡೆಸಿದ್ದ. ಅಲ್ಲಿಗೆ 40 ಯೋಧರು ಕ್ಷಣಾರ್ಧದಲ್ಲಿ ಹುತಾತ್ಮರಾದರು. ಅಂದು ನಡೆದ ಆತ್ಮಹತ್ಯಾ ಬಾಂಬರ್ ದಾಳಿ ಜಮ್ಮು-ಕಾಶ್ಮೀರದಲ್ಲಿ ಇದುವರೆಗೆ ಭಾರತೀಯ ಸೇನೆಯ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿಯಾಗಿದೆ.
ದಾಳಿಯಲ್ಲಿ ನಮ್ಮ ಕರ್ನಾಟಕದ ಮಂಡ್ಯದ ಗುರು ಹುತಾತ್ಮರಾದವರಲ್ಲಿ ಒಬ್ಬರು. ಜಮ್ಮು-ಕಾಶ್ಮೀರದ ಜನ ನೆಮ್ಮದಿಯಿಂದ ಇರಲು ಈ ಯೋಧರ ಕಾರ್ಯ ಅನಿವಾರ್ಯವಾಗಿತ್ತು. ಹೀಗಾಗಿ ಇವರೆಲ್ಲ ತಮಗೆ ವಹಿಸಿದ್ದ ಕಾರ್ಯ ನಿರ್ವಹಿಸಲು ತೆರಳುತ್ತಿದ್ದ ವೇಳೆ ನಡೆದ ಅತ್ಯಂತ ಘನಘೋರ ದಾಳಿ ಎಲ್ಲರನ್ನು ಬೆಚ್ಚಿ ಬೀಳಿಸಿತ್ತು.
ಇಂದಿಗೂ ಸಹ ಗಡಿಯಲ್ಲಿ ಇಂತಹ ಲಕ್ಷಾಂತರ ಸೈನಿಕರು ನಮ್ಮ ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ದಿನದಂದು ಅವರನ್ನ ನೆನೆಯದೇ ಇದ್ರೆ, ನಾವು ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಿಲ್ಲ ಈ ಸತ್ಯವನ್ನು ಭಾರತೀಯರು ಎಂದಿಗೂ ಮರೆಯಬಾರದು.
PublicNext
14/02/2021 10:08 am