ಮಹಿಳಾ ಎಸ್ಐ ಒಬ್ಬರು ಅನಾಥ ಶವಕ್ಕೆ ಹೆಗಲು ಕೊಟ್ಟು ಮಾನವೀಯತೆ ಮೆರೆದ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಗ್ರಾಮ ಅಡವಿಕೊತ್ತೂರು ನಡೆದಿದೆ. ಈ ಅಪರೂಪದ ಘಟನೆಯ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅಡವಿಕೊತ್ತೂರು ಗ್ರಾಮದ ಜಮೀನುವೊಂದರಲ್ಲಿ ಅನಾಥ ಶವ ಪತ್ತೆಯಾಗಿತ್ತು. ಎರಡು ದಿನಗಳಿಂದ ಹೊಲದಲ್ಲೇ ಬಿದ್ದಿದ್ದ ವ್ಯಕ್ತಿಯ ಮೃತದೇಹವನ್ನು ಯಾರೊಬ್ಬರೂ ಕೂಡ ಸಾಗಿಸುವ ಕೆಲಸ ಮಾಡಿರಲಿಲ್ಲ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕಾಸಿಗುಬ್ಬ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೊಟ್ಟೂರು ಸಿರಿಶಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಗ್ರಾಮಸ್ಥರು ಶವವನ್ನ ಹೊತ್ತೊಯ್ಯಲು ಮುಂದೆ ಬಾರದ ಹಿನ್ನೆಲೆ ವ್ಯಕ್ತಿಯೊಬ್ಬರ ಸಹಾಯ ಪಡೆದು ಶವವನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಸ್ವತಃ ತಾವೇ ಹೊತ್ತೊಯ್ದಿದ್ದಾರೆ.
ಸುಮಾರು ಎರಡು ಕಿಲೋಮೀಟರ್ ದೂರ ನಡೆದು ಅಂತ್ಯಸಂಸ್ಕಾರ ಮಾಡುವ ಜಾಗಕ್ಕೆ ತಲುಪಿದ್ದಾರೆ. ಬಳಿಕ ಅಂತ್ಯಕ್ರಿಯೆ ನೆರವೇರಿಸಲು ಲಲಿತಾ ಚಾರಿಟೆಬಲ್ ಟ್ರಸ್ಟ್ಗೆ ಮೃತದೇಹವನ್ನ ಹಸ್ತಾಂತರಿಸಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಯ ಮಾನವೀಯತೆಗೆ ಜನರಿಂದ ಶ್ಲಾಘನೆ ವ್ಯಕ್ತವಾಗ್ತಿದೆ.
ಸಿರಿಶಾ ಅವರ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಜೊತೆಗೆ ಆಂಧ್ರ ಪ್ರದೇಶದ ಡಿಜಿಪಿ ಗೌತಮ್ ಸಾವಂಗ್ ಅವರು ಈ ಮಾನವೀಯತೆಯ ಕೆಲಸವನ್ನು ಬಹಳ ಮೆಚ್ಚಿಕೊಂಡಿದ್ದಾರೆ.
PublicNext
02/02/2021 10:12 am