ಕೋಲ್ಕತ್ತಾ: ಭಾರತದಲ್ಲಿ ಲಾರಿ, ಬಸ್ ಅಂತಹ ದೊಡ್ಡ ವಾಹನ ಚಾಲನೆ ಮಾಡುವ ಮಹಿಳೆಯರನ್ನು ನೋಡಿರುವುದು, ಕೇಳಿರುವುದು ವಿರಳ. ಆದರೆ ಬದುಕು ಕಲಿಸಿದ ಜೀವನ ಪಾಠದಿಂದ ಯುವತಿಯೊಬ್ಬರು ಬಸ್‌ನಂತರ ದೊಡ್ಡ ವಾಹನ ಚಾಲನೆ ಮಾಡುತ್ತಿದ್ದಾರೆ. ಈ ಮೂಲಕ ಅತಿ ಕಿರಿಯ ವಯಸ್ಸಿನ ಮಹಿಳಾ ಡ್ರೈವರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಪಶ್ಚಿಮ ಬಂಗಾಳದ ಕಲ್ಪನಾ ಮೊಂಡಾಲ್ 21ರ ವಯಸ್ಸಿನಲ್ಲೇ ಕೋಲ್ಕತ್ತಾದ ಜನನಿಬಿಡ ಪ್ರದೇಶಗಳಲ್ಲಿ ಬಸ್ ಚಾಲನೆ ಮಾಡುತ್ತಾರೆ. ಕಲ್ಪನಾ ಅವರಿಗೆ ತಂದೆಯೇ ಸ್ಫೂರ್ತಿ. ಅವರು ಕೂಡ ಚಾಲನೆಯನ್ನು ಉಸಿರಾಗಿಸಿಕೊಂಡಿದ್ದರು. ಆದರೆ ಎರಡು ವರ್ಷಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಕಲ್ಪನಾ ತಂದೆ ಕಾಲು ಕಳೆದುಕೊಂಡು ವಾಹನ ಚಾಲನೆ ಮಾಡದಂತಾಗಿದೆ. ಹೀಗಾಗಿ ಕುಟುಂಬ ನಿರ್ವಹಣೆ ಜವಾಬ್ದಾರಿ ಹೊತ್ತ ಕಲ್ಪನಾ ಬಸ್ ಚಾಲನೆ ಮಾಡುತ್ತಿದ್ದಾರೆ.
ಹೌದು, ಕಲ್ಪನಾ ಅವರು ಕೇವಲ 8ನೇ ವಯಸ್ಸಿನಲ್ಲೇ ಮನೆಯ ಪಕ್ಕದಲ್ಲಿ ಇದ್ದ ಸ್ಥಳದಲ್ಲಿ ಬಸ್ ಚಾಲನೆ ಕಲಿಯುತ್ತಿದ್ದರು. ಬಳಿಕ ಡ್ರೈವಿಂಗ್ ಲೈಸೆನ್ಸ್ ಪಡೆದು ಮುಖ್ಯರಸ್ತೆಗಳಲ್ಲಿ ಚಾಲನೆ ಮಾಡಲು ಆರಂಭಿಸಿದರು. ಬಸ್ ಚಾಲನೆಗೆ ಮುಂದಾದ ಕಲ್ಪನಾ ಅವರಿಗೆ ಅನೇಕ ಬಸ್ ಮಾಲೀಕರು ಅವಕಾಶ ಕೊಡಲಿಲ್ಲ. ಆದರೆ ಕೆಲ ದಿನಗಳ ನಂತರ ಮಾಲೀಕರೊಬ್ಬರು ಮುಂದೆ ಬಂದು ಕಲ್ಪನಾಗೆ ನೆರವು ನೀಡಿದರು. ಅದರಂತೆ ಮಾಲೀಕನ ನಂಬಿಕೆಯನ್ನು ಉಳಿಸಿಕೊಂಡ ಕಲ್ಪನಾ ಇಂದು ದೇಶದ ಮನೆ ಮಾತಾಗಿದ್ದಾರೆ.
ಜನನಿಬಿಡ ಕೋಲ್ಕತ್ತಾ ನಗರದಲ್ಲಿ ವಾಹನ ಚಾಲನೆ ಮಾಡುವುದು ಸುಲಭದ ಮಾತಲ್ಲ. ಆದರೆ ಇಕ್ಕಾಟದ ಪ್ರದೇಶಗಳಲ್ಲಿಯೂ ಕಲ್ಪನಾ ಸುಲಭವಾಗಿ ಬಸ್ ಚಲಾಯಿಸುತ್ತಾರೆ. ಕಲ್ಪನಾ ಬಸ್ ಚಾಲನೆ ಮಾಡುವುದನ್ನು ಕೆಲವು ಪೊಲೀಸ್ ಅಧಿಕಾರಿಗಳು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
10/01/2021 01:24 pm