ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳದ ಮೊದಲ ಮಂಗಳಮುಖಿ ಡಾಕ್ಟರ್ ಬದುಕಿನ ಕರುಳಿನ ಕತೆ

ಮಂಗಳಮುಖಿಯಾಗಿ ಈ ಸಮಾಜದಲ್ಲಿ ಬದುಕುವುದೇ ಕಷ್ಟ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾರೆ ಪ್ರಿಯಾ ಎಂಬ ದಿಟ್ಟ ಯುವತಿ. ಕೇರಳದ ಮೊದಲ ಟ್ರಾನ್ಸ್ ಜೆಂಡರ್ ಡಾಕ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರಿಯಾ ತಮ್ಮ ಬದುಕಿನ ಕತೆಗಳನ್ನು ‘ದಿ ಬೆಟರ್ ಇಂಡಿಯಾ’ ಜತೆ ಹಂಚಿಕೊಂಡಿದ್ದಾರೆ .

ತನ್ನ 15ನೇ ವಯಸ್ಸಿನಲ್ಲಿ ಬದಲಾದ ವರ್ತನೆಯಿಂದ ಸಮಾಜದಲ್ಲಿ ಅಪಹಾಸ್ಯ ಮತ್ತು ಬೆದರಿಕೆಗೆ ಒಳಗಾಗುತ್ತಿದ್ದೇನೆಂದು ಪ್ರಿಯಾಗೆ ಅರ್ಥವಾಗಿತ್ತು. ಹೀಗಾಗಿ ಶಾಲೆಗಳಲ್ಲಿ ಭಾವನೆಗಳನ್ನು ಹಿಡಿತದಲ್ಲಿರಿಸಿಕೊಳ್ಳುವುದು ದೊಡ್ಡ ಸವಾಲಾಗಿದ್ದರೂ ಯಾವುದಕ್ಕೂ ಅಂಜದೇ ಓದುವ ಬಗ್ಗೆ ಹೆಚ್ಚು ಗಮನ ಹರಿಸಿದರು.

ತನ್ನ ಬದುಕಿನ ಪಯಣದ ಬಗ್ಗೆ ಪ್ರಿಯಾ ಹೇಳುವುದು ಹೀಗೆ- 2013 ರಲ್ಲಿ ಪ್ರವೇಶ ಪರೀಕ್ಷೆ ಬರೆದು ಕೇರಳದ ಒಲ್ಲೂರಿನ ವೈದ್ಯರತ್ನಂ ಆಯುರ್ವೇದ ಕಾಲೇಜಿನಲ್ಲಿ ಬಿಎಎಂಸ್ ಪದವಿ ಪಡೆದೆ. ಆಗ ನಾನು ಗಂಡಾಗಿಯೇ ಇದ್ದೆ. ಮದುವೆ ವಿಷಯದಲ್ಲಿ ಆಸಕ್ತಿ ಇರಲಿಲ್ಲ. ಇದನ್ನು ತಪ್ಪಿಸುವುದಕ್ಕಾಗಿಯೇ ಮಂಗಳೂರಿನಲ್ಲಿ ಎಂಡಿ ಕೋರ್ಸ್ ಮಾಡಿದೆ. ಎಂಡಿ ಶಿಕ್ಷಣ ಮುಗಿಸಿದ ಕೂಡಲೇ ತ್ರಿಪುಣಿತುರ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಕಣ್ಣೂರಿನ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸಿದೆ.

ನಾನು ಅವನಲ್ಲ; ಅವಳು ಎಂದು ಗೊತ್ತಾದರೂ ಗಂಡಾಗಿ ಇರುವುದು ಕಷ್ಟವಾಗಿತ್ತು. ಆದರೂ ನಾನು ಗಂಡಿನಂತೆ ಇರಲು ಶ್ರಮಿಸಿದೆ. ನನ್ನ ಚಲನವಲನ ಬೇರೆಯಾಗಿದ್ದರೂ, ಗಂಡಿನಂತೆ ಬಟ್ಟೆ ತೊಟ್ಟು ಗಂಡಸಾಗಿ ಕಾಣಲು ತುಂಬಾ ಕಷ್ಟಪಟ್ಟೆ. ನನ್ನೊಳಗಿನ ಹೆಣ್ಣಿನ ವ್ಯಕ್ತಿತ್ವವನ್ನು ಅಡಗಿಸುವ ಪ್ರಯತ್ನವಾಗಿತ್ತು ಅದು.

2018ರಲ್ಲಿ ತ್ರಿಶ್ಶೂರಿನ ಸೀತಾರಾಮ್ ಆಯುರ್ವೇದ ಆಸ್ಪತ್ರೆಗೆ ವೈದ್ಯೆಯಾಗಿ ಸೇರಿದೆ. ಅಲ್ಲಿಂದ ಬದುಕು ಬದಲಾಯಿತು. ವೃತ್ತಿ ಜೀವನದಲ್ಲಿ ಸಾಧನೆ ಗಳಿಸಿದ್ದಕ್ಕೆ ನಮ್ಮ ಹೆತ್ತವರು ಹೆಮ್ಮೆಪಟ್ಟರು. ನಾನು ನನ್ನ ಬದುಕಿನಲ್ಲಿ ಖುಷಿಯಾಗಿದ್ದರೂ ನನ್ನ ಅಸ್ಮಿತೆ ನನ್ನನ್ನು ಕಾಡುತ್ತಲೇ ಇತ್ತು. ಈ ವಿಷಯವನ್ನು ನನ್ನ ಹೆತ್ತವರಲ್ಲಿ ಹೇಳಲೇ ಬೇಕು ಎಂದು ನಿರ್ಧರಿಸಿದೆ.

ನಾನು ಪ್ರಿಯಾ..

ಲಿಂಗ ಪರಿವರ್ತನೆ ಬಗ್ಗೆ ನಾನು ಅಧ್ಯಯನ ಮಾಡಲು ಶುರುಮಾಡಿದೆ. ಅದಕ್ಕೆ ತಗಲುವ ವೆಚ್ಚ , ಶಸ್ತ್ರಕ್ರಿಯೆ ನಂತರ ಏನಾಗುತ್ತದೆ ಎಂಬುದರ ಬಗ್ಗೆ ಯೋಚನೆ ಮಾಡಿದೆ. ಆಮೇಲೆ ಗಟ್ಟಿ ಮನಸ್ಸು ಮಾಡಿ ಹೆತ್ತವರಿಗೆ ವಿಷಯ ತಿಳಿಸಿದೆ. ಈ ವಿಷಯ ಕೇಳಿ ಅವರಿಗೆ ಆಘಾತ ಮತ್ತು ಬೇಸರ ಆಗಿತ್ತು. ಅವರ ಭಾವನೆ ನನಗೆ ಅರ್ಥವಾಗುತ್ತದೆ. ನಾನು ಇದನ್ನು ಅವರಿಗೆ ಹೇಳದೇ ಇದ್ದರೆ ಅದು ಅನ್ಯಾಯವಾಗುತ್ತಿತ್ತು. ನಾನು ಮಾಡಿದ ಅಧ್ಯಯನದಿಂದಲೇ ಹೆತ್ತವರಿಗೆ ವಿಷಯ ಮನದಟ್ಟು ಮಾಡಲು ಸಾಧ್ಯವಾಯಿತು. ಅವರು ನನಗೆ ಬೆಂಬಲವಾಗಿ ನಿಂತರು. ಸರ್ಜರಿ ಹೊತ್ತಲ್ಲಿ ನಮ್ಮಮ್ಮ ಜತೆಗಿದ್ದರು.

ಆರು ಸರ್ಜರಿಗಳನ್ನು ಮಾಡಿಕೊಂಡಿದ್ದೆ. ವಾಯ್ಸ್ ಥೆರಪಿ ಮತ್ತು ಕಾಸ್ಮೆಟಿಕ್ ಸರ್ಜರಿಯನ್ನೂ ನಾನು ಮಾಡಿಸಿಕೊಂಡೆ, ನಮ್ಮ ಅಗತ್ಯಕ್ಕೆ ತಕ್ಕಂತೆ ಮಾಡಿಸುವ ಸರ್ಜರಿಗಳ ವೆಚ್ಚವೂ ಭಿನ್ನವಾಗಿರುತ್ತದೆ. ಸಾಮಾನ್ಯ ಕಸಿ ಶಸ್ತ್ರಚಿಕಿತ್ಸೆಗೆ ₹ 3 ಲಕ್ಷ ಸಾಕು, ಆದರೆ ನನಗೆ ಅದು ಪರ್ಫೆಕ್ಟ್ ಆಗಿ ಬೇಕಿತ್ತು. ಹಾಗಾಗಿ ನಾನು ₹ 8 ಲಕ್ಷ ವೆಚ್ಚದ ಸರ್ಜರಿ ಮಾಡಿಸಿಕೊಂಡೆ. ನನ್ನ ಉಳಿತಾಯದ ಹಣದಿಂದಲೇ ಸರ್ಜರಿಗಾಗಿ ಹಣ ವ್ಯಯಿಸಿದರೂ ಶೇ. 95ರಷ್ಟು ಹಣ ನೀಡಿದ್ದು ನನ್ನ ಪೋಷಕರೇ.

ಲಿಂಗ ಪರಿವರ್ತನೆಯ ಬಳಿಕ ಆಸ್ಪತ್ರೆಯ ಸಿಬ್ಬಂದಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಆತಂಕ ಇತ್ತು. ಅಲ್ಲಿ ಸಹೋದ್ಯೋಗಿಗಳಿಂದ ಹಿಡಿದು ಎಂ.ಡಿ.ವರೆಗೆ ಎಲ್ಲರೂ ನನ್ನ ಬೆಂಬಲಕ್ಕೆ ನಿಂತರು. ಜಾನಕಿ ಎಂಬ ಹೆಸರನ್ನಿಟ್ಟುಕೊಳ್ಳಬೇಕು ಎಂದು ಬಯಸಿದೆ. ನನ್ನ ಸಂಬಂಧಿ ಪ್ರಿಯಾ ಎಂಬ ಹೆಸರು ಸೂಚಿಸಿದರು. ನಾನು ಪ್ರಿಯಾ ಹೆಸರನ್ನೇ ಆಯ್ಕೆ ಮಾಡಿಕೊಂಡೆ ಅಂತಾರೆ ವೈದ್ಯೆ ಡಾ. ವಿ.ಎಸ್. ಪ್ರಿಯಾ.

Edited By : Nagaraj Tulugeri
PublicNext

PublicNext

08/01/2021 08:21 pm

Cinque Terre

118.53 K

Cinque Terre

16

ಸಂಬಂಧಿತ ಸುದ್ದಿ