ಬೆಳಗಾವಿ: ನಾನು ದೇವರು. ಸ್ವರ್ಗದಿಂದಲೇ ಇಲ್ಲಿಗೆ ಬಂದಿದ್ದೇನೆ. ಹೀಗಂತಾ ಹೇಳಿಕೊಂಡು ಬೆಳಗಾವಿಯ ಕಣಬರ್ಗಿ ಗ್ರಾಮದಲ್ಲಿ ವಿದೇಶಿ ಮೂಲದ ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದಾನೆ. ಈ ವಿಚಿತ್ರ ಮಾನವ ಕಳೆದ 15 ದಿನಗಳಿಂದ ಅದೇ ಗ್ರಾಮದಲ್ಲಿ ಬೀಡು ಬಿಟ್ಟಿದ್ದಾನೆ. ಬರಿಗಾಲಲ್ಲೇ ಓಡಾಡುತ್ತಿದ್ದಾನೆ. ಈತ ಯಾರಿರಬಹುದು? ಗೊತ್ತು ಗುರಿ ಇಲ್ಲದೇ ನಮ್ಮೂರಿಗೇಕೆ ಬಂದ? ಇವೇ ಮುಂತಾದ ಪ್ರಶ್ನೆಗಳ ಬಗ್ಗೆ ಕಣಬರ್ಗಿ ಗ್ರಾಮಸ್ಥರಿಗೆ ಕನ್ಫ್ಯೂಸ್ ಹಿಡಿದುಬಿಟ್ಟಿದೆ.
ಕೈಯಲ್ಲಿ ದೊಣ್ಣೆ, ಚೀಲ ಹಿಡಿದುಕೊಂಡು ತಿರುಗುತ್ತಿರುವ ಈತ ವಿದೇಶಿ ಇಂಗ್ಲೀಷ್ ಮಾತನಾಡುತ್ತಾನೆ. ನೀವು ಯಾರು ಎಂದು 'ಐ ಆ್ಯಮ್ ಗಾಡ್' ಎನ್ನುತ್ತಾನೆ. ಎಲ್ಲಿಯವನು ಎಂದು ಕೇಳಿದ್ರೆ 'ಫ್ರಂ ಹೆವೆನ್' ಎನ್ನುತ್ತಾನೆ. ಜರ್ಮನಿಯಿಂದ 350 ದಿವಸಗಳ ಹಿಂದೆ ಬಂದಿದ್ದೇನೆ. ಮೊದಲು ಚೆನ್ನೈಗೆ ಬಂದು ಅಲ್ಲಿಂದ ಬೆಂಗಳೂರು, ಗೋವಾಗೆ ಭೇಟಿ ನೀಡಿದ್ದೆ. ಇದೀಗ ಕಣಬರ್ಗಿಗೆ ಬಂದಿದ್ದೇನೆ ಎನ್ನುತ್ತಿದ್ದಾನೆ.
ಪಾಸ್ ಪೋರ್ಟ್ ವೀಸಾ ಬಗ್ಗೆ ಕೇಳಿದ್ರೆ ಅದೆಲ್ಲ ನನ್ನ ಗರ್ಲ್ ಫ್ರೆಂಡ್ ಬಳಿ ಇದೆ ಎನ್ನುತ್ತಾನೆ. ಜೊತೆಗೆ ಅವರಿವರಿಂದ ಮೊಬೈಲ್ ಪಡೆದು ಜರ್ಮನಿಯಲ್ಲಿರುವ ಹೆಂಡತಿಯೊಂದಿಗೆ ಮಾತನಾಡುತ್ತಾನೆ. ಬಸ್ ನಿಲ್ದಾಣದಲ್ಲೇ ಮಲಗುವ ಈತನಿಗೆ ಸ್ಥಳೀಯರು ರೊಟ್ಟಿ ಊಟ ಒಲ್ಲದ ಕಾರಣ ಬ್ರೆಡ್, ಹಾಲು ಹಣ್ಣು ಕೊಟ್ಟು ಮಲಗಲು ಹಾಸಿಗೆಯನ್ನೂ ಕೊಟ್ಟಿದ್ದಾರೆ.
ಆದರೆ ಯಾವುದೇ ವೀಸಾ, ಪಾಸ್ಪೋರ್ಟ್ ಇಲ್ಲದೆ ಓಡಾಡುತ್ತಿರುವ ಈತನನ್ನು ವಶಕ್ಕೆ ಪಡೆದು ವಿಚಾರಿಸಲು ಪೊಲೀಸರು ಮುಂದಾಗುತ್ತಿಲ್ಲ ಎನ್ನಲಾಗಿದೆ.
PublicNext
06/01/2021 07:55 pm