ಹೊಸದಿಲ್ಲಿ: ಡಿ.4 ಭಾರತ ತನ್ನ ನೌಕಾಸೇನೆಯಿಂದ ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ ದಿನ. ಆ ದಿನದ ನೆನಪಿಗಾಗಿ ನೌಕಾದಿನ ಆಚರಿಸಲಾಗುತ್ತದೆ. ದೇಶದ ಯುದ್ಧ ನೌಕೆಗಳಿಗೆ ಮಹಿಳಾ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇವರ ಸಂಖ್ಯೆ ಹೆಚ್ಚಿಸಲಾಗುವುದು ಎಂದು ನೌಕಾಪಡೆ ನೂತನ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ತಿಳಿಸಿದರು.
ನೌಕಾದಿನ (ಡಿ.4)ದ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ವಿಮಾನ ವಾಹಕ ಸಮರ ನೌಕೆ ಐಎನ್ ಎಸ್ ವಿಕ್ರಮಾದಿತ್ಯ ಸೇರಿ 15 ನೌಕೆಗಳಿಗೆ 28 ಮಹಿಳಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಮುಂದೆಯೂ ಮಹಿಳೆಯರಿಗೆ ಹೊಸ ಹೊಸ ಜವಾಬ್ದಾರಿಗಳನ್ನು ನೀಡಲಾಗುವುದು," ಎಂದು ಮಾಹಿತಿ ನೀಡಿದರು.
''ಯುದ್ಧ ನೌಕೆಗಳನ್ನು ನಿರ್ವಹಿಸುವುದು ಸುಲಭವಲ್ಲ. ಅದರಲ್ಲೂ, ಕ್ಷಿಪಣಿ ಹಾಗೂ ಟ್ಯಾಂಕರ್ ಗಳನ್ನು ನಿರ್ನಾಮ ಮಾಡುವ ನೌಕೆಗಳ ನಿರ್ವಹಣೆ, ಶತ್ರುಗಳ ವಿರುದ್ಧ ಹೋರಾಟ ಸವಾಲಿನದ್ದಾಗಿರುತ್ತದೆ. ಇಂತಹ ನೌಕೆಗಳಲ್ಲೂ ಮಹಿಳಾ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಅವರನ್ನು ಅಣಿಗೊಳಿಸಲಾಗುತ್ತಿದೆ,'' ಎಂದು ಮಾಹಿತಿ ನೀಡಿದರು.
1971ರ ಭಾರತ-ಪಾಕ್ ಯುದ್ಧದಲ್ಲಿ ಭಾರತೀಯ ನೌಕಾಪಡೆ ಮೊದಲ ಬಾರಿ ಹಡಗು ನಿಗ್ರಹ ಕ್ಷಿಪಣಿ ಬಳಸಿ ಪಾಕ್ ನ ಮೂರು ಯುದ್ಧ ಹಡಗುಗಳನ್ನು ಕರಾಚಿಯ ಸಮುದ್ರದಲ್ಲಿ ಹೊಡೆದುಹಾಕಿತು. ಈ ಯುದ್ಧ ಗೆದ್ದ ಸ್ಮರಣಾರ್ಥ ಡಿ. 4ರಂದು ನೌಕಾದಿನ ಆಚರಿಸಲಾಗುತ್ತದೆ. ಈ ಬಾರಿ ನೌಕಾದಿನಕ್ಕೆ 50 ವರ್ಷ, ಹಾಗಾಗಿ 'ಸ್ವರ್ಣಿಂ ವಿಜಯ ದಿವಸ್' ಎಂದು ಆಚರಿಸಲಾಗುತ್ತಿದೆ.
PublicNext
04/12/2021 09:22 am