ದಾವಣಗೆರೆ: ಬಡವರು, ಕೂಲಿ ಕಾರ್ಮಿಕರ ಮಕ್ಕಳಿಗೆ ಟ್ಯೂಷನ್ ಹೋಗೋದೇ ಕಷ್ಟ. ಯಾಕೆಂದರೆ ಅವರ ಬಳಿ ಹಣವೇ ಇರೋಲ್ಲ. ಇಂಥ ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ವಿದ್ಯಾರ್ಥಿನಿಯೊಬ್ಬರು ಬೆಣ್ಣೆನಗರಿಯಲ್ಲಿ ಗಮನ ಸೆಳೆಯುತ್ತಿದ್ದಾರೆ.
ಅಂದ ಹಾಗೆ ಈಕೆ ಹೆಸರು ಸಹನಾ. ಐಗೂರು ಮಹಾದೇವಪ್ಪ ವೈ. ಎಂ. ಹಾಗೂ ಎ.ಟಿ. ಶೈಲಾ ದಂಪತಿ ಪುತ್ರಿ. ರೈತ ಮತ್ತು ವ್ಯಾಪಾರಿಯಾಗಿರುವ ಮಹಾದೇವಪ್ಪರ ಮಗಳಾದ ಈಕೆ ವೆಲ್ಲೂರಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಾಲ್ಕನೇ ವರ್ಷದ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದಾರೆ.
ಎಂಸಿಸಿ ಬಿ ಬ್ಲಾಕ್‌ನಲ್ಲಿನ ಈಜುಕೊಳದ ಪಾರ್ಕ್‌ನಲ್ಲಿ ಹತ್ತಾರು ಬಡಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಿದ್ದಾರೆ. ತನ್ನ ಓದಿನ ನಡುವೆ ಬಿಡುವು ಮಾಡಿಕೊಂಡು ಸಹನಾ ಮಕ್ಕಳಿಗೆ ಪಾಠ ಪ್ರವಚನ ನೀಡುವ ಮೂಲಕ ಮಕ್ಕಳ ಪಾಲಿನ ವಿದ್ಯಾದೇವತೆಯಾಗಿದ್ದಾರೆ. ಈಗ ಆನ್‌ಲೈನ್ ಕ್ಲಾಸ್ ನಡೆಯುತ್ತಿರುವುದರಿಂದ ದಿನದಲ್ಲಿ ಒಂದು ಗಂಟೆ ಕಾಲ ಈ ಕಾಯಕದಲ್ಲಿ ನಿರತರಾಗಿರುವ ಸಹನಾ ಅವರೆಂದರೆ ಮಕ್ಕಳಿಗೆ ಪಂಚಪ್ರಾಣ.
ಸುಮಾರು ಒಂದು ವರ್ಷದಿಂದ ಪಾಠ ಮಾಡುತ್ತಿರುವುದನ್ನು ಗಮನಿಸಿ ಸ್ಥಳೀಯರು ಆ ಮಕ್ಕಳಿಗೆ ಪೆನ್ನು, ನೋಟ್ ಪುಸ್ತಕ ಸಹ ನೀಡಿದ್ದಾರೆ. ಕರುಣಾ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಸಹಾಯ ಮಾಡುವ ಭರವಸೆ ಸಿಕ್ಕಿದೆ. ಬಡಮಕ್ಕಳಿಗೆ ನೆರವಾಗಬೇಕು. ನಾವು ಕಲಿತದ್ದರಲ್ಲಿ ಬಡ ಮಕ್ಕಳಿಗೆ ಕಲಿಸಬೇಕೆಂಬುದು ನನ್ನ ಅಭಿಲಾಷೆ ಅನ್ನುತ್ತಾರೆ ಸಹನಾ.
PublicNext
08/03/2022 10:48 pm