ಉತ್ತರ ಪ್ರದೇಶ : ಗುರುಶಿಷ್ಯರ ಸಂಬಂಧ ಅವಿನಾಭಾವ ಸಂಬಂಧ, ಅದನ್ನು ಪದಗಳಿಂದ ಬಣ್ಣಿಸಲಾಗದು. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಗುರು ಪಾತ್ರ ಬಹು ದೊಡ್ಡದಾಗಿರುತ್ತದೆ.
ಇನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಅಚ್ಚುಮೆಚ್ಚಿನ ಶಿಕ್ಷಕರಾಗಿರುವುದು ಒಂದು ಸಾಧನೆ ಎಂದರೆ ಅತಿಶಯೋಕ್ತಿಯಾಗಲಾರದು. ವಿದ್ಯಾರ್ಥಿ ಜೀವನದಲ್ಲಿ ಗುರುಗಳ ಪಾತ್ರ ಬಹುಮುಖ್ಯವಾಗಿರುತ್ತೆ. ವಿದ್ಯಾರ್ಥಿಗಳ ಭವಿಷ್ಯವನ್ನು ಸುಭದ್ರ ಮತ್ತು ಅಭದ್ರ ಮಾಡುವ ಎರಡು ಆಯ್ಕೆ ಗುರುಗಳ ಕೈಯಲ್ಲಿರುತ್ತದೆ.
ಅಂತಹ ಮಹಾನ್ ಸ್ಥಾನದಲ್ಲಿರುವ ನೆಚ್ಚಿನ ಗುರು ಬಿಟ್ಟು ಹೋಗುವಾಗ ವಿದ್ಯಾರ್ಥಿಗಳು ಕಣ್ಣೀರಿಟ್ಟ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋನೊಮ್ಮೆ ಗಮನಿಸಿ ಇಲ್ಲಿ ಏಕಾಏಕಿ ವರ್ಗಾವಣೆಗೊಂಡ ಗುರುಗಳನ್ನು ಸುತ್ತುವರೆದ ವಿದ್ಯಾರ್ಥಿಗಳು. ನಮ್ಮನ್ನು ಬಿಟ್ಟೋಗಬೇಡಿ ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಬೀಳ್ಕೊಡುವ ಪರಿ ಹೃದಯ ಸ್ಪರ್ಶಿಯಾಗಿದೆ.
ಮಕ್ಕಳೊಂದಿಗೆ ಇನ್ನೂ ಕೆಲವರು ಆ ಶಿಕ್ಷಕನನ್ನ ಅಲ್ಲಿಂದ ಹೋಗಲು ಬಿಡದೇ ಗಟ್ಟಿಯಾಗಿ ತಬ್ಬಿಕೊಂಡಿದ್ದಾರೆ. ಈ ದೃಶ್ಯ ಕಂಡು ಬಂದಿದ್ದು ಚಂದೌಲಿ ಜಿಲ್ಲೆಯಲ್ಲಿ. ವಿದ್ಯಾರ್ಥಿಗಳ ಈ ಅತಿಯಾದ ಪ್ರೀತಿಯ ಪರಿ ನೋಡಿ ಶಿಕ್ಷಕ ಶಿವೇಂದ್ರ ಸಿಂಗ್ ಬಾಘೇಲ್ ಮೂಕನಾಗಿ ಹೋಗಿದ್ದರು.
ಇನ್ನು ಶಿಕ್ಷಕ ಶಿವೇಂದ್ರ ಇಲ್ಲಿನ ಚಕಿಯಾ ಬ್ಲಾಕ್ ನ ರತಿಗಢ ಕಾಂಪೋಸಿಟ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಅವರಿಗೆ ಬೇರೆ ಶಾಲೆಗೆ ವರ್ಗಾವಣೆ ಆಗಿದ್ದರಿಂದ ವಿದ್ಯಾರ್ಥಿಗಳು ಬೀಳ್ಕೊಡುವ ಪರಿ ಹೀಗಿತ್ತು. ಶಿಕ್ಷಕ ಮತ್ತು ವಿದ್ಯಾರ್ಥಿಗಳ ಈ ಬಾಂಧವ್ಯವನ್ನ ನೋಡಿ ನೆಟ್ಟಿಗರು ಕೂಡಾ ಭಾವುಕರಾಗಿದ್ದಾರೆ.
PublicNext
18/07/2022 10:40 pm