ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಮುಸ್ಲಿಂ ವ್ಯಕ್ತಿಯಿಂದ ಹನುಮಾನ್ ದೇವಾಲಯಕ್ಕೆ ಭೂಮಿ ದಾನ

ಬೆಂಗಳೂರು: ಧಾರ್ಮಿಕ ಅಸಹಿಷ್ಣುತೆಯ ಸಮಯದಲ್ಲಿ ಕೋಮು ಸೌಹಾರ್ದತೆಗೆ ಬೆಂಗಳೂರಿನ ಮುಸ್ಲಿಂ ವ್ಯಕ್ತಿಯೊಬ್ಬರು ಸಾಕ್ಷಿಯಾಗಿದ್ದಾರೆ. ಹನುಮಾನ್ ದೇವಾಲಯವನ್ನು ಪುನರುಜ್ಜೀವನಗೊಳಿಸಲು ಎಚ್‌ಎಂಜಿ ಬಾಷಾ ಅವರು 80 ಲಕ್ಷ ರೂ. ಮೌಲ್ಯದ 1.5 ಗುಂಟಾ ಭೂಮಿ ದಾನ ಮಾಡಿದ್ದಾರೆ.

ಸರಕು ವ್ಯವಹಾರದಲ್ಲಿ ತೊಡಗಿರುವ 65 ವರ್ಷದ ಬಾಷಾ ಅವರು ಅನೇಕರ ಮನ ಗೆದ್ದಿದ್ದಾರೆ. ಗ್ರಾಮೀಣ ಜಿಲ್ಲೆಯ ಹೊಸಕೋಟೆ ತಾಲೂಕಿನ ವಾಲಗೇರಪುರದ ಸಣ್ಣ ಹನುಮಾನ್ ದೇವಾಲಯದ ಪಕ್ಕದಲ್ಲೇ ಬಾಷಾ ಅವರ ಕುಟುಂಬಕ್ಕೆ ಸೇರಿದ ಮೂರು ಎಕರೆ ಭೂಮಿ ಇದೆ. ಮೂರು ದಶಕಗಳಿಂದ ಭಕ್ತರು ಹನುಮಾನ್ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯು ದೇಗುಲವನ್ನು ಪುನರುಜ್ಜೀವನಗೊಳಿಸಲು ಮುಂದಾಗಿದ್ದರು. ಇದಕ್ಕಾಗಿ ಭೂಮಿಯನ್ನು ಹುಡುಕುತ್ತಿರುವುದನ್ನು ಬಾಷಾ ಗಮನಿಸಿದ್ದರು.

ವಿಶೇಷವೆಂದರೆ ದೇವಾಲಯದ ಆಡಳಿತಮಂಡಳಿ ಸ್ವಲ್ಪ ಭೂಮಿಯನ್ನು ಮಾತ್ರ ಕೇಳಿತ್ತು. ಆದರೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದನ್ನು ಗಮನಿಸಿರುವ ಬಾಷಾ 1.5 ಗುಂಟಾ ಜಾಗವನ್ನು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಷಾ ಅವರು, ''ಗ್ರಾಮಸ್ಥರು ದೇವಾಲಯವನ್ನು ನವೀಕರಿಸಲು ನಿರ್ಧರಿಸಿದರು. ಆದರೆ ಸ್ಥಳಾವಕಾಶ ಇರಲಿಲ್ಲ. ಅವಶ್ಯಕತೆಯನ್ನು ಮನಗಂಡು ಮೂರು ಎಕರೆ ಭೂಮಿಯಲ್ಲಿ 1.5 ಗುಂಟಾ ಜಾಗವನ್ನು ದಾನ ಮಾಡಲು ಮುಂದಾಗಿ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟೆ. ನನ್ನ ಈ ನಿರ್ಧಾರಕ್ಕೆ ಕುಟುಂಬ ಸದಸ್ಯರು ಕೂಡ ಒಪ್ಪಿಗೆ ಸೂಚಿಸಿದರು'' ಎಂದು ತಿಳಿಸಿದ್ದಾರೆ.

ಬಾಷಾ ಅವರ ಮಹಾ ದಾನದಿಂದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ ಸೇವಾ ಸಮಿತಿಯು 1 ಕೋಟಿ ರೂ.ಗಳ ವೆಚ್ಚದಲ್ಲಿ ದೇವಾಲಯವನ್ನು ನವೀಕರಿಸಲು ಮುಂದಾಗಿದೆ. ಬಾಷಾ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Edited By : Vijay Kumar
PublicNext

PublicNext

07/12/2020 09:59 am

Cinque Terre

80.28 K

Cinque Terre

35