ದಾವಣಗೆರೆ: ರೈಲಿನಿಂದ ಆಕಸ್ಮಿಕವಾಗಿ ಆಯಾತಪ್ಪಿ ಬಿದ್ದ ವೃದ್ಧೆಯನ್ನು ರೈಲ್ವೆ ಪೊಲೀಸರಿಬ್ಬರು ರಕ್ಷಣೆ ಮಾಡಿದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಬೆಂಗಳೂರಿನಿಂದ ಮೀರಜ್ ಗೆ ತೆರಳುತ್ತಿದ್ದ ರೈಲಿನಿಂದ ವೃದ್ಧೆ ಆಕಸ್ಮಿಕವಾಗಿ ಬಿದ್ದರು. ಇನ್ನೇನೂ ರೈಲ್ವೆ ಹಳಿಯಡಿ ಬಿದ್ದು ಚಕ್ರಕ್ಕೆ ಸಿಲುಕುವಷ್ಟರಲ್ಲೇ ರೈಲ್ವೆ ಪೊಲೀಸರ ಸಮಯ ಪ್ರಜ್ಞೆಯಿಂದ 60 ವರ್ಷದ ವೃದ್ದೆ ಬಚಾವಾಗಿದ್ದಾರೆ.
ಬೆಂಗಳೂರಿನಿಂದ ಮೀರಜ್ ಗೆ ವಿಶ್ವ ಮಾನವ ಎಕ್ಸ್ ಪ್ರೆಸ್ ರೈಲಿನಲ್ಲಿ ವೃದ್ಧೆ ಪ್ರಯಾಣ ಮಾಡುತ್ತಿದ್ದರು. ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನೀರು ಕುಡಿಯುವುದಕ್ಕಾಗಿ ಇಳಿದಿದ್ದರು. ಈ ವೇಳೆ ರೈಲು ಹೊರಟಿದ್ದು, ಓಡಿ ಬಂದು ರೈಲು ಹತ್ತುವಾಗ ಆಯಾತಪ್ಪಿ ಬೋಗಿಯ ಪ್ರವೇಶ ದ್ವಾರದ ಬಳಿ ಕೈ ಹಿಡಿತ ತಪ್ಪಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ರೈಲ್ವೆ ಪೊಲೀಸ್ ಕಾನ್ಸ್ಟೇಬಲ್‌ಟಿ. ಆರ್. ಚೇತನ್ ಗಮನಿಸಿದ್ದು, ಕೂಡಲೇ ರೈಲಿನಡಿಗೆ ಬೀಳುತ್ತಿದ್ದ ಮಹಿಳೆಯ ಕೈಹಿಡಿದು ಮೇಲಕ್ಕೆ ಎತ್ತುವ ಮೂಲಕ ರಕ್ಷಣೆ ಮಾಡಿದರು. ಮತ್ತೊಬ್ಬ ಕಾನ್ಸ್ಟೇಬಲ್ ಆದ ಬಿ. ಎನ್. ಹಾಲೇಶ್ ಸಹ ನೆರವಿಗೆ ಧಾವಿಸಿ ಇಬ್ಬರೂ ಕೂದಲೆಳೆಯ ಅಂತರದಲ್ಲಿ ಅಜ್ಜಿಯ ಪ್ರಾಣ ಉಳಿಸಿದ್ದಾರೆ.
ಈ ಘಟನೆ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್ ಕಾನ್ಸ್ಟೇಬಲ್‌ಗಳಾದ ಹಾಲೇಶ್ ಹಾಗೂ ಚೇತನ್ ಅವರ ಈ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
PublicNext
15/05/2022 03:31 pm