ಧಾರವಾಡ: ಕ್ರೀಡಾ ಚಟುವಟಿಕೆಗಳು ದೇಹವನ್ನು ಸದೃಢಗೊಳಿಸಿ ಮನಸ್ಸಿಗೆ ಸಂತಸ ನೀಡುತ್ತವೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ ಬಾಸ್ಕೆಟ್ ಬಾಲ್ ತರಬೇತುದಾರ ರಾಜೇಂದ್ರ ನಾಯ್ಕ ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕ್ಲಾಸಿಕ್ ಪದವಿಪೂರ್ವ ಕಾಲೇಜು ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಧಾರವಾಡ ಶಹರ ತಾಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯದಿಂದಲೇ ವಿದ್ಯಾರ್ಥಿಗಳು ಆಟ ಮತ್ತುದೈಹಿಕ ಕಸರತ್ತುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಅತಿಥಿಗಳಾಗಿದ್ದ ಪ.ಪೂ. ಶಿಕ್ಷಣ ಇಲಾಖೆಯ ಜಿಲ್ಲಾಧ್ಯಕ್ಷ, ಕ್ರೀಡಾ ಸಂಯೋಜನಾಧಿಕಾರಿ ಯು. ಎನ್. ಹಜಾರೆ ಮಾತನಾಡಿ, ವಿದ್ಯಾರ್ಥಿಗಳು ಎಲ್ಲ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಇದರಿಂದ ಸದೃಢತೆ ಮತ್ತು ಪ್ರಮಾಣಪತ್ರಗಳು ಸಿಗುವುದರಿಂದ ಸರ್ಕಾರಿ ಸೇವೆಗೆ ಸೇರಲು ಅವಕಾಶಗಳು ದೊರೆಯುತ್ತವೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಕ್ಲಾಸಿಕ್ ಸಮೂಹ ಸಂಸ್ಥೆಗಳು ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶಕ, ಲಕ್ಷ್ಮಣ.ಎಸ್. ಉಪ್ಪಾರ ಮಾತನಾಡಿ, ಇಂದಿನ ಕಲುಷಿತ ವಾತಾವರಣದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳು ಅತ್ಯಂತ ಉಪಯುಕ್ತವಾಗಿವೆ ಎಂದು ಹೇಳಿದರು.
ಜಿಲ್ಲಾ ದೈಹಿಕ ಉಪನ್ಯಾಸಕರ ಸಂಘದ ಕಾರ್ಯದರ್ಶಿ ರಾಜಕುಮಾರ ಇಸ್ಲಾಂಪುರೆ ಇತರ ಗಣ್ಯರು ವೇದಿಕೆಯಲ್ಲಿದ್ದರು. ಕ್ಲಾಸಿಕ್ ಪ.ಪೂ. ಕಾಲೇಜು ಪ್ರಾಚಾರ್ಯಎಚ್. ಎಂ. ಉಡಕೇರಿ ಸ್ವಾಗತಿಸಿದರು. ಕ್ಲಾಸಿಕ್ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಬಸವರಾಜ ಕುಪ್ಪಸಗೌಡ್ರ ನಿರೂಪಿಸಿದರು. ಉಪನ್ಯಾಸಕಿ ಪ್ರತಿಭಾ ಹಿರೇಮಠ ವಂದಿಸಿದರು. ಬಾಲಕ-ಬಾಲಕಿಯರು ಸೇರಿದಂತೆ 50 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.
Kshetra Samachara
12/09/2022 11:23 am