ಮಾದರಿ ಶಿಕ್ಷಕಿಯಾಗಿ ಸಾಮಾಜಿಕ ಸೇವಾ ಕೈಂಕರ್ಯಕ್ಕೆ ಹಲವು ಪ್ರಶಸ್ತಿಗಳು ಈ ಮಹಿಳೆಗೆ ಲಭ್ಯವಾಗಿವೆ. ಶ್ರೀಲಂಕಾದಲ್ಲಿ 30 ವಯಸ್ಸಿನ ಮೇಲ್ಪಟ್ಟವರಿಗೆ ನಡೆದ ಅಥ್ಲೆಟಿಕ್ಸ್ ಕೂಟದಲ್ಲಿ 2ನೇ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಹೌದು... ಹುಬ್ಬಳ್ಳಿ ನೇಕಾರ ನಗರದ ನಿವಾಸಿ ಸುನಂದಾ ಬೆನ್ನೂರ ಅವರೇ ಅಥ್ಲೆಟಿಕ್ಸ್ ನಲ್ಲಿ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮಿಂಚಿದವರು!
ಸುನಂದಾ ಸಾವಿರಾರು ಮಕ್ಕಳ ನೆಚ್ಚಿನ ಶಿಕ್ಷಕಿ ಕೂಡ. ಇವರು ಕ್ರೀಡೆ ಅಷ್ಟೇ ಅಲ್ಲ, ಸಮಾಜ ಸೇವೆಗೂ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಇವರು ಪ್ರತಿವರ್ಷ ಇಬ್ಬರು ಮಕ್ಕಳನ್ನು ದತ್ತು ಪಡೆದು, ಅವರಿಗೆ ಶಿಕ್ಷಣ ನೀಡುತ್ತಿದ್ದಾರೆ. ಅದಲ್ಲದೆ, ಇವರಿಂದ ಅದೆಷ್ಟೋ ಮಕ್ಕಳು ವಿದ್ಯೆ ಕಲಿತು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಸುನಂದಾ ರಾಜ್ಯ, ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಈಗಾಗಲೇ ಸುನಂದಾ ನಿವೃತ್ತಿ ಹೊಂದಿದ್ದರೂ ಸಮಾಜ ಸೇವೆ ಮುಂದುವರೆಸಿದ್ದಾರೆ. ಇದೇ ಫೆಬ್ರವರಿ 19, 20 ರಂದು ನಡೆದ ಶ್ರೀಲಂಕಾ- ಇಂಡಿಯಾ ಅಥ್ಲೆಟಿ ಕ್ಸ್ ಚಾಂಪಿಯನ್ ಶಿಪ್ ನಲ್ಲಿ ರನ್ನರ್ ಅಪ್ ಸ್ಥಾನ ಪಡೆದು ತನ್ನೂರು ಅಲ್ಲದೆ, ಕರ್ನಾಟಕವೂ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಒಟ್ಟಿನಲ್ಲಿ ಇವರ ನಿಸ್ವಾರ್ಥ ಸೇವೆಗೆ ನೂರಾರು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.
ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಮಾಜ ಸೇವೆ ಮಾಡಿ, ಮಕ್ಕಳ ಕ್ರೀಡಾ ಏಳ್ಗೆಯೂ ಸುನಂದಾ ಅವರಿಂದ ಸಾಧ್ಯವಾಗಲಿ.
Kshetra Samachara
06/03/2022 04:34 pm