ವರದಿ: ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ: ಆತ ನಿಜಕ್ಕೂ ಬಹುದೊಡ್ಡ ಪ್ರತಿಭೆ. ದೊಡ್ಡ ದೊಡ್ಡ ಪ್ರತಿಭೆಗಳೆಲ್ಲ ಯಾವುದೋ ಸಣ್ಣ ವಠಾರದಲ್ಲಿ ಹುಟ್ಟುವುದು ನಿಜಕ್ಕೂ ಅಕ್ಷರಶಃ ಸತ್ಯವಾದ ಮಾತು. ಗಲ್ಲಿಯಲ್ಲಿರುವ ಸಣ್ಣ ಗ್ರೌಂಡ್‌ನಲ್ಲಿ ಆಡಿದ ಆ ಯುವಕ ಈಗ ದೇಶವನ್ನೇ ಮೆಚ್ಚಿಸುವಂತ ಆಟದ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ಹಾಗಿದ್ದರೇ ಯಾರು ಆ ಯುವಕ? ಆತನ ಸಾಧನೆ ಏನು ಅಂತೀರಾ ಪಬ್ಲಿಕ್ ನೆಕ್ಸ್ಟ್ ಪರಿಚಯಿಸುತ್ತಿದೆ ಕ್ರೀಡಾ ಪ್ರತಿಭೆಯ ಸ್ಟೋರಿ...
ಫುಟ್ಬಾಲ್ ಗ್ರೌಂಡ್ ಎಂದಾಕ್ಷಣ ಎಲ್ಲರ ಗಮನಕ್ಕೆ ಬರುವುದು ಹಸಿರು ಹಾಸಿನ ಮೈದಾನ. ಆದರೆ ಹುಬ್ಬಳ್ಳಿಯ ಯುವಕ ಸುಧೀರ್ ಕೋಟೆಕೆಲ ತಮ್ಮ ವಠಾರದ ಅಂಗಳದಲ್ಲಿರುವ ಸಣ್ಣ ಮೈದಾನವೊಂದರಲ್ಲಿಯೇ ಆಟ ಆಡುವ ಮೂಲಕ ಫುಟ್ಬಾಲ್ ಆಟದಲ್ಲಿ ಮಹತ್ವದ ಸಾಧನೆ ಮಾಡಿದ್ದಾನೆ. ಮೊದಲ ರಾಷ್ಟ್ರೀಯ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಆಡಿರುವ ಮೊದಲ ಹುಬ್ಬಳ್ಳಿಗ ಎಂಬ ಕೀರ್ತಿಗೆ ಸುಧೀರ್ ಕೊಟಿಕೆಲ್ ಸಾಕ್ಷಿಯಾಗಿದ್ದಾರೆ. ಮೊನ್ನೆಯಷ್ಟೇ ಕೇರಳದಲ್ಲಿ ನಡೆದ ಅಖಿಲ ಭಾರತ ಸಂತೋಷ ಟ್ರೋಫಿಯಲ್ಲಿ ಹುಬ್ಬಳ್ಳಿಯ ಗಾಂಧಿವಾಡದ ಸುಧೀರ್ ಕೊಟಿಕೇಲ ಐದು ಗೋಲ್ ದಾಖಲಿಸಿದ್ದು, ಒಂದೇ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲ್ ದಾಖಲಿಸಿ ಫುಟ್ಬಾಲ್ ಪ್ರೇಮಿಗಳನ್ನು ಮೂಕವಿಸ್ಮಿತರನ್ನಾಗಿ ಮಾಡಿದ್ದಾರೆ.
ಹೌದು. ಗಲ್ಲಿಯಲ್ಲಿ ಆಡಿದ ಈ ಯುವಕ ಈಗ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಆಟದ ಪ್ರದರ್ಶನ ನೀಡುವ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದು, ಹುಬ್ಬಳ್ಳಿಯ ಸಾಧಕರಲ್ಲಿ ಫುಟ್ಬಾಲ್ ಕ್ಷೇತ್ರದಲ್ಲಿಯೇ ಸಾಧನೆ ಮಾಡಿದ ಮೊದಲಿಗನಾಗಿದ್ದಾನೆ. ಮತ್ತಷ್ಟು ಪ್ರೋತ್ಸಾಹ ಸಿಕ್ಕರೆ ಹುಬ್ಬಳ್ಳಿಯ ಕೀರ್ತಿಯನ್ನು ಆಕಾಶೆದೆತ್ತರಕ್ಕೆ ಒಯ್ಯುವುದಂತೂ ಸತ್ಯ.
ಇನ್ನೂ ಈಗಾಗಲೇ ಹುಬ್ಬಳ್ಳಿಯ ಜನರು ಸಾಕಷ್ಟು ಸಂಭ್ರಮಿಸಿದ್ದು, ನಮ್ಮ ಓಣಿಯ ಹುಡುಗ ರಾಷ್ಟ್ರೀಯ ಮಟ್ಟದಲ್ಲಿ ಫುಟ್ಬಾಲ್ ಆಡುವ ಮೂಲಕ ಮಿಂಚಿದ್ದಾನೆ ಎಂದು ಸಂಭ್ರಮಿಸಿದ್ದು, ಕ್ರೀಡಾ ಸಾಧಕನಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಅದೆಷ್ಟೋ ಆರ್ಥಿಕ ಸಂಕಷ್ಟ, ಕುಟುಂಬದ ಸಮಸ್ಯೆ, ಆಡಲು ಸರಿಯಾದ ಗ್ರೌಂಡ್, ಕಿಟ್ ಇಲ್ಲದಿದ್ದರೂ ಛಲ ಬಿಡದ ಸುಧೀರ್ ಈಗ ದೇಶವನ್ನು ತನ್ನತ್ತ ನೋಡುವಂತೆ ಮಾಡಿದ್ದಾರೆ. ಇಲ್ಲಿ ಅದೆಷ್ಟೋ ಪ್ರತಿಭೆಗಳು ಸೂಕ್ತ ಪ್ರೋತ್ಸಾಹವಿಲ್ಲದೇ ತೆರೆ ಮರೆಯ ಕಾಯಿಯಾಗಿವೆ. ಇಲ್ಲಿರುವ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ಸಿಗಬೇಕಿದೆ.
ಒಟ್ಟನಲ್ಲಿ ಹುಬ್ಬಳ್ಳಿಯ ಹೈದ ಸಾಕಷ್ಟು ಹವಾ ಮಾಡಿದ್ದು, ಅಭಿಮಾನಿಗಳ ಹಾಗೂ ಕುಟುಂಬದವರ ಹರ್ಷ ಮುಗಿಲು ಮುಟ್ಟಿದೆ. ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೂಕ್ತ ಪ್ರೋತ್ಸಾಹ ನೀಡಿ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗಬೇಕಿದೆ.
ಮಲ್ಲೇಶ ಸೂರಣಗಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/05/2022 08:53 pm