ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಅವಳು ಇನ್ನೂ ಬಾಲಕಿ. ಸಾಧನೆ ಮಾಡಬೇಕೆಂಬ ಹಂಬಲ.ನಿರಂತರ ಪರಿಶ್ರಮವೂ ಇತ್ತು. ಅದೇ ಬಾಲಕಿ ಈಗ ರಾಷ್ಟ್ರಕ್ಕೆ ಹೆಮ್ಮೆ ತರುವ ಸಾಧನೆ ಮಾಡಿದ್ದಾಳೆ. ಈ ಪುಟ್ಟ ಬಾಲಕಿಯ ದೊಡ್ಡ ಸಾಧನೆ ಕಥೆ ನಾವ್ ಹೇಳ್ತೀವಿ ಬನ್ನಿ.
ಈ ಪುಟ್ಟಿ ಹೆಸರು ಸ್ತುತಿ ಕುಲಕರ್ಣಿ. ಹುಬ್ಬಳ್ಳಿಯ ಶಿರೂರ ಪಾರ್ಕ್ ನಿವಾಸಿ. ರಶ್ಮಿ ಕಿಶೋರ್ ಕುಲಕರ್ಣಿ ಅವರ ಮುದ್ದಿನ ಮಗಳು. ಈಕೆಗೆ ಹೂಲಾ ಹೂಪ್ಸ್ ಸುತ್ತುತ್ತಾ ಸ್ಕೇಟಿಂಗ್ ಮಾಡುವುದು ಅಂದರೆ ಚಿಕ್ಕ ವಯಸ್ಸಿನಿಂದಲೂ ಬಹಳ ಇಷ್ಟವಂತೆ. ಇದನ್ನು ಮನಗಂಡ ಪೋಷಕರು ಈಕೆಗೆ ಉತ್ತಮ ತರಬೇತಿ ಕೊಡಿಸಿದ್ದಾರೆ.
ಈಗ ಇದೇ ಸ್ತುತಿ ಕುಲಕರ್ಣಿ ಹೂಲಾ ಹೂಪ್ಸ್ ಸುತ್ತುತ್ತಲೆ ಇನ್ಲೈನ್ ಸ್ಕೇಟಿಂಗ್ ಮಾಡಿ 11 ದಾಖಲೆ ಮುರಿದ ಸಾಧನೆ ಮಾಡಿದ್ದಾಳೆ. 23 ಸೆಕೆಂಡುಗಳವರೆಗೆ ಮೂರು ಹೂಲಾ ಹೂಪ್ಸ್ ಸುತ್ತುತ್ತಲೇ ಇನ್ಲೈನ್ ಸ್ಕೇಟ್‍ನಲ್ಲಿ ಅತಿ ವೇಗದ ಗಿನ್ನಿಸ್ ವಿಶ್ವ ದಾಖಲೆ ಮಾಡಿದ ಶ್ರೇಯಸ್ಸು ಇವಳದ್ದಾಗಿದೆ.
8 ನೇ ವಯಸ್ಸಿನಲ್ಲಿ ಈ ಬಾಲಕಿ ಇನ್ಲೈನ್ ಸ್ಕೇಟಿಂಗ್ ಕಲಿತು ಈ ಎರಡೂ ಕಲೆಗಳನ್ನೂ ಒಂದೇ ಆಗಿಸಿದ್ದಾಳೆ. ಸ್ವಯಂ ಪ್ರೇರಿತ ವ್ಯಕ್ತಿಯಾದ ಸ್ತುತಿ ಅನೇಕರಿಗೆ ಪ್ರೇರಣೆ ಕೂಡ ಆಗಿದ್ದಾಳೆ. ಬೈಜುಸ್ ನೊಂದಿಗೆ ಸ್ತುತಿ ತನ್ನ ಫ್ಯಾಶನ್ ಮತ್ತು ಶೈಕ್ಷಣಿಕ ಕಲಿಕೆ ಎರಡಕ್ಕೂ ಸಮನಾಗಿಯೇ ಸಮಯ ನೀಡಿದ್ದಾಳೆ. ಕಲಿಕೆಯನ್ನು ಇಷ್ಟಪಡುವಷ್ಟೇ ಸ್ಕೇಟಿಂಗ್ ಹೂಲಾ ಹೂಪ್ಸ್ ಸುತ್ತುವುದನ್ನೂ ಅಷ್ಟೇ ಇಷ್ಟಪಡುತ್ತಾಳೆ. ಅಲ್ಲದೇ ಇನ್ನೂ ಹೆಚ್ಚು ಸಾಧನೆ ಮಾಡುತ್ತಾಳೆ ಎಂಬ ವಿಶ್ವಾಸ ನನಗಿದೆ ಎನ್ನುತ್ತಾರೆ ಪೋಷಕರು.
ಒಟ್ಟಿನಲ್ಲಿ ಸ್ತುತಿ ಕುಲಕರ್ಣಿ ಹೂಲಾ ಹೂಪ್ಸ್ ಸುತ್ತುತ್ತಲೇ ಇನ್ಲೈನ್ ಸ್ಕೇಟಿಂಗ್ ಮಾಡಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾಳೆ. ಇವಳ ಸಾಧನೆ ಮತ್ತಷ್ಟು ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂಬುವುದು ಹುಬ್ಬಳ್ಳಿ ಜನರ ಅಭಿಲಾಷೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/02/2022 08:39 pm