ಹುಬ್ಬಳ್ಳಿ: ಸುಕ್ಷೇತ್ರ ದಾರಾವತಿ ಶ್ರೀ ಹನುಮಾನ ದೇವಸ್ಥಾನದಲ್ಲಿ ಇದೇ ಮೇ 13 ರಿಂದ 17ರವರೆಗೆ ಕಳಸಾರೋಹಣ, ಶ್ರೀ ಬಸವಣ್ಣ ಮಂಟಪ ಲೋಕಾರ್ಪಣೆ ಹಾಗೂ ನಂದಿ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ ಎಂದು ಗೋಕುಲ ಗ್ರಾಮದ ಹಿರಿಯರಾದ ನಿಂಗಪ್ಪ ಮ್ಯಾಗೇರಿ ಹೇಳಿದರು.
ಕಾರ್ಯಕ್ರಮ ವಿವರ: ಮೇ 13 ಶುಕ್ರವಾರದಂದು ಗೋಕುಲ್ ಶ್ರೀ ವೀರಾಂಜನೇಯ ಸ್ವಾಮೀಯ ದೇವಸ್ಥಾನದಿಂದ ಕಳಸ ಪಲ್ಲಕ್ಕಿ ಮತ್ತು ಉಣಕಲ್ ಗ್ರಾಮದ ಶ್ರೀ ಹನುಮಂತ ದೇವರ ಪಲ್ಲಕ್ಕಿ ಜಂಬೂ ಸವಾರಿ, ಅಶ್ವಮೇಧ ಉತ್ಸವವು ಕುಂಭ ವಾದ್ಯಮೇಳಗಳೊಂದಿಗೆ ಗೋಕುಲ ಗ್ರಾಮದಿಂದ ದಾರಾವತಿ ಹನುಮಾನ ದೇವಸ್ಥಾನ ಬರುತ್ತಾರೆ. ಇದಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಚಾಲನೆ ನೀಡುತ್ತಾರೆ.
ಮೇ 14 ಶನಿವಾರದಂದು ಕಳಸಾರೋಹಣ, ಏಕದಶ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಹಾಗೂ ಮಹಾ ಮಂಗಳಾರತಿ ಇರುತ್ತದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ. ಗುರುಸಿದ್ಧರಾಜಯೋಗೇಂದ್ರ ಮಹಾಸ್ವಾಮಿಗಳು ಮೂರು ಸಾವಿರಮಠ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್, ಮುಖ್ಯ ಅತಿಥಿಗಳಾಗಿ ಹಲವರು ಮಠದ ಸ್ವಾಮೀಜಿಗಳು ಭಾಗವಹಿಸುತ್ತಾರೆ. ಅದೇ ದಿನ ಸಾಯಂಕಾಲ 5ಕ್ಕೆ ದೇವಸ್ಥಾನದ ಮುಂದೆ ಓಕುಳಿ ಆಟ, ರಾತ್ರಿ 8 ಗಂಟೆಗೆ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ನಡೆಯಲಿದೆ.
ಮೇ 15ರಂದು ರವಿವಾರ ಸಾಯಂಕಾಲ 6ಕ್ಕೆ ಖಾಸಗಿ ಕನ್ನಡ ವಾಹಿನಿ ಖ್ಯಾತಿಯ ಹನುಮಂತ ಲಮಾಣಿ ಹಾಗೂ ರಾಕ್ ಸ್ಟಾರ್ ಇವೆಂಟ್ಸ್ ಇವರಿಂದ ಸಂಗೀತ ಕಾರ್ಯಕ್ರಮಗಳು. ಮೇ 16 ಸೋಮವಾರದಂದು 'ಹಳ್ಳಿ ಹುಡುಗಿ ಮೊಸರ ಗಡಗಿ' ನಾಟಕ ಪ್ರದರ್ಶನ, ಮೇ 17 ಮಂಗಳವಾರದಂದು ಜಗ್ಗಿ ಕಾಟಾ ನಿಕಾಲಿ ಕುಸ್ತಿಗಳ ಕಾರ್ಯಕ್ರಮ. ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ ಉದ್ಘಾಟಿಸಲಿದ್ದಾರೆ. ಸಾಯಂಕಾಲ ಜಾನಪದ ವೈವಿಧ್ಯಮಯ ಕಾರ್ಯಕ್ರಮಗಳು ಜರಗುತ್ತವೆ.
ಎಲ್ಲ ಸದ್ಭಕ್ತರು ಬಂದು ಮೇ 13ರಿಂದ 17ರವರೆಗೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಹನುಮಂತನ ಆಶಿರ್ವಾದ ಪಡೆಯಬೇಕೆಂದು ಆಡಳಿತ ಮಂಡಳಿ ಕೋರಿದೆ.
Kshetra Samachara
11/05/2022 11:47 am