ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ವಿರುಪಾಕ್ಷೇಶ್ವರ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.
ಅಮ್ಮಿನಘಡದ ಶಂಕರ ರಾಜೇಂದ್ರ ಸ್ವಾಮೀಜಿ, ಕಮತಗಿಯ ಹುಚ್ಚೇಶ್ವರ ಸ್ವಾಮೀಜಿ, ಮಮದಾಪುರದ ಮುರುಘೇಂದ್ರ ಸ್ವಾಮೀಜಿ, ನರೇಂದ್ರದ ಸಂಗಮೇಶ ಅಜ್ಜನವರು, ಉಪ್ಪಿನ ಬೆಟಗೇರಿಯ ಕುಮಾರ ವಿರುಪಾಕ್ಷ ಸ್ವಾಮೀಜಿ, ಮುನವಳ್ಳಿಯ ಮುರುಘೇಂದ್ರ ಸ್ವಾಮೀಜಿ ಹಾಗೂ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥೋತ್ಸವಕ್ಕೂ ಮುನ್ನ ಚಿಕ್ಕಲಪರ್ವಿಯ ಸದಾಶಿವ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು. ಅಡ್ಡಪಲ್ಲಕ್ಕಿ ವಿರುಪಾಕ್ಷೇಶ್ವರ ಕರ್ತೃ ಗದ್ದುಗೆಗೆ ಬಂದ ತಕ್ಷಣ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷಾ ಅವರ ಭಾವಚಿತ್ರಗಳು ಗಮನಸೆಳೆದವು.
ನಂತರ ಸಾವಿರಾರು ಭಕ್ತರ ಹರ್ಷೊದ್ಘಾರಗಳ ಮಧ್ಯೆ ವಿರುಪಾಕ್ಷೇಶ್ವರ ರಥವನ್ನು ಎಳೆಯಲಾಯಿತು. ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ್ದ ಸಾವಿರಾರು ಭಕ್ತರು ರಥಕ್ಕೆ ಉತ್ತುತ್ತಿ, ಬಾಳೆಹಣ್ಣು, ನಿಂಬೆಹಣ್ಣುಗಳನ್ನು ತೂರಿ ಭಕ್ತಿಯ ನಮನ ಸಲ್ಲಿಸಿದರು.
ಕೊರೊನಾ ನಂತರ ಇದೇ ಮೊದಲ ಬಾರಿಗೆ ಉಪ್ಪಿನ ಬೆಟಗೇರಿಯ ವಿರುಪಾಕ್ಷೇಶ್ವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿದೆ.
Kshetra Samachara
06/04/2022 10:43 pm