ಧಾರವಾಡ: ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾದ ಧಾರವಾಡದ ಸೋಮೇಶ್ವರ ದೇವಸ್ಥಾನ ಇಂದು ಅಕ್ಷರಶಃ ಭಕ್ತರಿಂದ ತುಂಬಿ ತುಳುಕುತ್ತಿದೆ.
ಮಹಾಶಿವರಾತ್ರಿ ಅಂಗವಾಗಿ ಈ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಸೋಮೇಶ್ವರನಿಗೆ ವಿಶೇಷ ಅಭಿಷೇಕ ನಡೆಯುತ್ತದೆ. ಶಿವರಾತ್ರಿಯಂದು ಸೋಮೇಶ್ವರನ ದರ್ಶನ ಪಡೆದುಕೊಳ್ಳಲು ಧಾರವಾಡ ಸೇರಿದಂತೆ ವಿವಿಧ ಊರುಗಳಿಂದ ಭಕ್ತರ ದಂಡೇ ಇಲ್ಲಿಗೆ ಹರಿದು ಬರುತ್ತದೆ.
ಮಂಗಳವಾರ ಕೂಡ ಬೆಳಗಿನಜಾವ 3 ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ದೇವಸ್ಥಾನದ ಮುಖ್ಯದ್ವಾರದಿಂದ ಕರ್ತೃ ಗದ್ದುಗೆವರೆಗೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಸೋಮೇಶ್ವರನ ದರ್ಶನ ಪಡೆದರು. ಸುಡುವ ನೆತ್ತಿಯನ್ನೂ ಲೆಕ್ಕಿಸದೇ ಭಕ್ತರು ದೇವರ ದರ್ಶನ ಪಡೆದು ಕೃತಾರ್ಥರಾದರು. ಗರ್ಭಗುಡಿಯಲ್ಲಿ ಸೋಮೇಶ್ವರನಿಗೆ ಭಕ್ತರು ಹಾಲಿನ ಅಭಿಷೇಕ ಮಾಡಿ ಪುನೀತರಾದರು.
ಶಿವರಾತ್ರಿಯಂದು ಉಪವಾಸ ವೃತ ಮಾಡುವ ಪದ್ಧತಿ ಇದೆ. ಹೀಗಾಗಿ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಖರ್ಜೂರ, ಬಾಳೆಹಣ್ಣುಗಳನ್ನು ವಿತರಣೆ ಮಾಡಲಾಯಿತು. ಒಟ್ಟಾರೆಯಾಗಿ ದಕ್ಷಿಣ ಕಾಶಿ ಎಂದೇ ಖ್ಯಾತಿ ಹೊಂದಿದ ಸೋಮೇಶ್ವರನಿಗೆ ವಿದ್ಯಾಕಾಶಿ ಜನತೆ ವಿಶೇಷ ಪೂಜೆ, ಪುನಸ್ಕಾರ ಸಲ್ಲಿಸಿ ಮಹಾಶಿವರಾತ್ರಿಯ ಮೆರಗು ಹೆಚ್ಚಿಸಿದರು.
Kshetra Samachara
01/03/2022 02:31 pm