ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ಹುಬ್ಬಳ್ಳಿ : ಇಲ್ಲಿಯ ಪ್ರಸಿದ್ದ ಮೂರುಸಾವಿರ ಮಠದ ಅಸ್ತಿ ದಾನ ವಿವಾದ ಈಗ ರಾಜಕೀಯ ತಿರುವು ಪಡೆಯ ತೊಡಗಿದೆ. ಬಿಜೆಪಿ ಮುಖಂಡ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಕಾರ್ಯಾಧ್ಯಕ್ಷರಾಗಿರುವ ಬೆಳಗಾವಿಯ ಕೆಎಲ್ಇ ಸಂಸ್ಥೆಯ ನಿಯೋಜಿತ ಮೆಡಿಕಲ್ ಕಾಲೇಜು ಹಾಗೂ ಅಸ್ಪತ್ರೆಗೆ ಗಬ್ಬೂರ ಬಳಿಯ ಮಠದ ಸುಮಾರು 25 ಎಕರೆ ಜಮೀನು ದಾನ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಈವರೆಗೂ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು, ಇದು ಭಕ್ತರ ಮಠದ ಆಸ್ತಿ ಅದನ್ನು ಪರಭಾರೆ ಮಾಡುವುದು ಬೇಡ ಎಂದು ಒತ್ತಾಯಿಸ ತೊಡಗಿದ್ದರು. ಇಷ್ಟೇ ಅಲ್ಲ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ಸಹ ಪ್ರಭಾಕರ ಕೋರೆ ಅವರಿಗೆ ಪತ್ರ ಬರದು ತನ್ನ ಕೆಲವು ಬೇಡಿಕೆ ಮಂಡಿಸಿತ್ತು.
ಪತ್ರಕ್ಕೆ ಉತ್ತರ ಬರೆದಿದ್ದ ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು, ಈ ಭಾಗದ ಸಮಾಜದ ಜನರಿಗೆ ಉದ್ಯೋಗ ದೊರಕಿಸಿಕೊಡುವುದು ಸೇರಿದಂತೆ ಕೆಲವು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ವಿವಾದ ತಣ್ಣಗಾಗುವ ಲಕ್ಷಣ ಕಂಡುಬಂದಿತ್ತು.
ಆದರೆ ಭಾನುವಾರ ಕಾಂಗ್ರೆಸ್ ಮುಖಂಡ ನಾಗರಾಜ ಛಬ್ಬಿ ಕಚೇರಿಯಲ್ಲಿ ಜರುಗಿದ ಲಿಂಗಾಯತ ಮುಖಂಡರ ವಿಶೇಷ ಸಭೆಯಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ಮೂರುಸಾವಿರ ಮಠದ ಆಸ್ತಿಯನ್ನು ಮರಳಿ ಶ್ರೀ ಮಠಕ್ಕೆ ಪಡೆಯಬೇಕೆಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿರುವುದು ರಾಜಕೀಯ ಸಂಘರ್ಷಕ್ಕೆ ಇಂಬು ಕೊಟ್ಟಂತಾಗಿದೆ.
ಸಭೆಯಲ್ಲಿ ಪ್ರಫುಚಂದ್ರ ರಾಯನಗೌಡ್ರ, ಎಂ.ಎಸ್. ಅಕ್ಕಿ, ಅನಿಲಕುಮಾರ ಪಾಟೀಲ್, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಬಳಿಗಾರ, ನಾಗರಾಜ ಗೌರಿ, ಪ್ರಕಾಶ ಬೆಂಡಿಗೇರಿ, ನ್ಯಾಯವಾದಿಗಳಾದ ನೀರಲಗಿ, ವಿ.ಕೆ. ಪಾಟೀಲ್, ರಜತ್ ಉಳ್ಳಾಗಡ್ಡಿಮಠ, ರವಿ ದಾಸನೂರ ಸೇರಿದಂತೆ ಇನ್ನೂ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಅಂದರೆ ಜಮೀನು ಪಡೆಯುತ್ತಿರುವುದು ಬಿಜೆಪಿಗೆ ಸೇರಿದ ನಾಯಕರ ಸಂಸ್ಥೆ. ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಅದಕ್ಕೆ ಪ್ರೋತ್ಸಾಹ ನೀಡುತ್ತಿರುವವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಎಂಬುದು ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿರಬಹುದು.
ಒಂದು ವೇಳೆ ಮಠದ ಭಕ್ತರಾಗಿಯೇ ಜಮೀನು ದಾನವನನ್ನು ವಿರೋಧಿಸುವುದಾಗಿದ್ದರೆ ಎಲ್ಲ ಪಕ್ಷಗಳಲ್ಲಿಯ ಸಮಾನ ಮನಸ್ಕರ ಸಭೆ ಕರೆದು ಚರ್ಚಿಸಬಹುದಿತ್ತಲ್ಲವೆ? ಕೇವಲ ಕಾಂಗ್ರೆಸ್ ನಾಯಕರೇ ಸಭೆ ಸೇರುವ ಉದ್ದೇಶವೇನು ಎಂದು ಮಠದ ಭಕ್ತರರು ಪ್ರಶ್ನಿಸುತ್ತಿದ್ದಾರೆ.
ಇಷ್ಟು ಮಾತ್ರವಲ್ಲ ಮಠದ ಜಮೀನು ವಿವಾದ ಈ ಕಾಂಗ್ರೆಸ್ಸಿನಲ್ಲಿಯೇ ಎರಡು ಗುಂಪುಗಳನ್ನು ಸೃಷ್ಟಿಸಿದೆ. ಈ ಹಿಂದೆ ಕೋರೆ ಅವರಿಗೆ ಪತ್ರ ಬರೆದಿದ್ದ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದಲ್ಲಿರುವ ಬಹುತೇಕ ಮುಖಂಡರು ಕಾಂಗ್ರೆಸ್ಸಿಗರು. ಒಕ್ಕೂಟದ ಅಧ್ಯಕ್ಷರಿಗೆ ಕೋರೆ ಅವರು ನೀಡಿದ್ದ ಉತ್ತರದಿಂದ ಇದೇ ಮುಖಂಡರು ಸಮಾಧಾನಗೊಂಡು ತಮ್ಮ ಹೋರಾಟವನ್ನು ಮುಂದೂಡಿದ್ದರು.
ಈಗ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ನಿರ್ಣಯಕ್ಕೆ ವ್ಯತಿರಿಕ್ತವಾಗಿ ಕೇವಲ ಲಿಂಗಾಯತ ಕಾಂಗ್ರೆಸ್ ಮುಖಂಡರು ಕೆಲವು ತೀರ್ಮಾನ ಕೈಗೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
Kshetra Samachara
08/02/2021 11:02 am