ತಾಲೂಕಿನ ಚೆಳಮಟ್ಟಿ ಗ್ರಾಮದ ಬೂದನಗುಡ್ಡ ಶ್ರೀ ಬಸವಣ್ಣನ ಜಾತ್ರೆ ಎಂದರೆ ಸಾಕು, ಉತ್ತರ ಕರ್ನಾಟಕದ ಜನರಿಗೆ ಅದೆನೋ ಹರುಷ. ಈ ಕ್ಷೇತ್ರ ಹುಬ್ಬಳ್ಳಿ ಹಾಗೂ ಕಲಘಟಗಿ ರಸ್ತೆ ಮಧ್ಯೆ ಚಳಮಟ್ಟಿ ಗ್ರಾಮದಲ್ಲಿ ನೋಡಲು ಸಿಗುತ್ತದೆ. ಗುಡ್ಡದ ಮೇಲೆ ಹೋಗುತ್ತಾ ಇದ್ದರೆ ಏನೋ ಉಲ್ಲಾಸ- ಸಂತೋಷ. ಮೇಲೆ ಹತ್ತಿದ ಬಳಿಕ ಹಚ್ಚ ಹಸಿರಿನ ವಾತಾವರಣ, ತಂಪಾದ ಗಾಳಿ... ನಿಸರ್ಗದ ಮಡಿಲಲ್ಲಿದ್ದ ಹಾಗೇ ಭಾಸವಾಗುತ್ತದೆ.
ಈ ದೇವಸ್ಥಾನದಲ್ಲಿ ಬಸವಣ್ಣನ ಮೂರ್ತಿ ಇದ್ದು ಶತಮಾನಗಳ ಇತಿಹಾಸ ಹೊಂದಿದೆ. ದೇವಸ್ಥಾನಕ್ಕೆ ರಾಜ್ಯದ ಹಲವು ಭಾಗಗಳಿಂದ ಜನರು ದರ್ಶನಕ್ಕೆ ಬರುವುದು ವಿಶೇಷವಾಗಿದೆ. ಈ ಕ್ಷೇತ್ರ ಉತ್ತರ ಕರ್ನಾಟಕದ ಜನರಿಗೆ ಮನೆ ದೇವರು ಕೂಡ ಆಗಿದ್ದು, ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆ ನಡೆಯುತ್ತದೆ. ಕೊನೆ ಸೋಮವಾರ ವಿಜೃಂಭಣೆಯಿಂದ ಜಾತ್ರೆ ಜರುಗುತ್ತದೆ.
ಈ ಜಾತ್ರೆಗೆ ಸಾವಿರಾರು ಜನರು ಎತ್ತಿನ ಗಾಡಿ, ಟ್ರ್ಯಾಕ್ಟರ್ ಮತ್ತಿತರ ವಾಹನಗಳಲ್ಲಿ ಆಗಮಿಸುತ್ತಾರೆ. ಜಾತ್ರೆ ಸಂದರ್ಭ ಇಲ್ಲಿ ಭಕ್ತಾದಿಗಳು ಅನ್ನಪ್ರಸಾದ ಕೂಡ ಮಾಡುತ್ತಾರೆ. ಇಲ್ಲಿ ಉತ್ತರ ಕರ್ನಾಟಕದ ಪ್ರಸಿದ್ಧ ತಿನಿಸು ಮಿರ್ಚಿ ಗಿರಿಮಿಟ್ ಕೂಡ ಸಿಗುತ್ತದೆ.
ಈ ಕ್ಷೇತ್ರಕ್ಕೆ ಎರಡು ದಾರಿಗಳಿದ್ದು, ಒಂದು ದಾರಿ ಕಾಲ್ನಡಿಗೆಯಲ್ಲಿ ಹೋಗಬಹುದು. ಇನ್ನೊಂದು ದಾರಿ ವಾಹನ ಮೂಲಕ ಹೋಗಬಹುದಾಗಿದೆ. ನೀವು ಕೂಡ ಈ ಕ್ಷೇತ್ರಕ್ಕೆ ಆಗಮಿಸಿ ಗುಡ್ಡವನ್ನು ಹತ್ತಿ, ಶ್ರೀ ಬಸವಣ್ಣ ದರುಶನ ಮಾಡಿ, ಕೃಪೆಗೆ ಪಾತ್ರರಾಗಿ.
ವರದಿ: ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್ ಕಲಘಟಗಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/08/2022 08:39 pm