ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 'ಗಾಂಧಿ ಟೋಪಿ ಮುಂದಿಟ್ಟುಕೊಂಡು ಸಮಾಜಕ್ಕೆ ಟೋಪಿ ಹಾಕಿದ ಕಾಂಗ್ರೆಸ್': ಕಟೀಲ್ ವಾಗ್ದಾಳಿ

ಧಾರವಾಡ: ಕಾಂಗ್ರೆಸ್ ಪಕ್ಷ ಗಾಂಧಿ ಟೋಪಿಯನ್ನು ಮುಂದಿಟ್ಟುಕೊಂಡು ಇಡೀ ಸಮಾಜಕ್ಕೆ ಟೋಪಿ ಹಾಕುವ ಕೆಲಸ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ವಾಗ್ದಾಳಿ ನಡೆಸಿದರು.

ಧಾರವಾಡದ ಮದುಕೇಶ್ವರ ದಂಡಿ ಕಲ್ಯಾಣಮಂಟಪದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ, ಕಾರ್ಯಕರ್ತರ ಸಂಕಲ್ಪ ಸಮಾವೇಶದಲ್ಲಿ ಕಟೀಲ್ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ರಾಷ್ಟ್ರವಾದವನ್ನು ಬದಿಗಿಟ್ಟು ಪರಿವಾರ ವಾದವನ್ನು ಮುಂದಿಟ್ಟಿತು. ಮಹಾತ್ಮ ಗಾಂಧಿಗೂ ಹಾಗೂ ರಾಹುಲ್ ಗಾಂಧಿಗೂ ಏನು ಸಂಬಂಧ? ಯಾರಾದರೂ ಹೇಳಬಲ್ಲಿರಾ? ದೇಶವನ್ನು ಜೋಡಿಸದವರು ಯಾರು? ವಿಭಜನೆ ಮಾಡಿದವರು ಯಾರು? ಎಂಬುದು ಜನತೆಗೆ ಗೊತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ ಎಂದು ಲೇವಡಿ ಮಾಡಿದರು.

ಜಾತಿ ಹೆಸರಿನಲ್ಲಿ ಈ ದೇಶವನ್ನು ಇಬ್ಬಾಗ ಮಾಡಲಾಯಿತು. ಅದೇ ರೀತಿ ಸಿದ್ದರಾಮಯ್ಯ ವೀರಶೈವ ಲಿಂಗಾಯತ ಎಂದು ಒಡೆಯಲು ಮುಂದಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಈ ದೇಶವನ್ನು ಜೋಡಿಸುವ ಕೆಲಸ ಮಾಡಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಚತುಷ್ಪತ ರಸ್ತೆ ಮಾಡಿಸುವ ಮೂಲಕ ದೇಶವನ್ನು ಜೋಡಣೆ ಮಾಡಿದರು.

ಈಗ ಅದೇ ರಸ್ತೆಯಲ್ಲಿ ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಈಗ ದಕ್ಷಿಣ ಹಾಗೂ ಉತ್ತರವನ್ನು ಮೋದಿ ಜೋಡಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರದ್ದು ಕಾಂಗ್ರೆಸ್ ಜೋಡೋ ಯಾತ್ರೆ ಎಂದರು.

ಒಂದು ಕಡೆ ಡಿಕೆಶಿ, ಇನ್ನೊಂದು ಕಡೆ ಸಿದ್ದು, ಇಬ್ಬರನ್ನೂ ಮುಗಿಸಲು ಖರ್ಗೆ ಬಣ ರೆಡಿಯಾಗಿದೆ. ಖರ್ಗೆಯನ್ನು ಸೋಲಿಸಲು ಪ್ರಯತ್ನಿಸಿದ್ದು ಸಿದ್ದರಾಮಯ್ಯ. ಆದರೆ, ಇದೀಗ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯನವರನ್ನು ಓಡಿಸಿದರು. ಬಾದಾಮಿ ಜನ ಈ ಬಾರಿ ನಮ್ಮ ಕ್ಷೇತ್ರಕ್ಕೆ ಬರಬೇಡಿ ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದಾರೆ. ಸಿದ್ದರಾಮಯ್ಯ ಈಗ ಜಾಗ ಹುಡುಕೋ ಯಾತ್ರೆ ಮಾಡಬೇಕು ಎಂದರು.

ಬಿಜೆಪಿ ಕಾರ್ಯಕರ್ತರ ಜವಾಬ್ದಾರಿ ದೊಡ್ಡದಿದೆ. ಭಾರತವನ್ನು ದೊಡ್ಡಮಟ್ಟಕ್ಕೆ ಕೊಂಡೊಯ್ಯಬೇಕು ಎಂಬುದೇ ನಮ್ಮ ಗುರಿ. ಅದಕ್ಕಾಗಿ ಕಾರ್ಯಕರ್ತರೆಲ್ಲರೂ ಕೆಲಸ ಮಾಡಬೇಕು. ಬೂತ್ ಅಧ್ಯಕ್ಷರಿಗೆ ಮತದಾರರ ಪಟ್ಟಿಯೇ ಭಗವದ್ಗೀತೆ ಇದ್ದಂತೆ. ಮತದಾರರೇ ದೇವರಿದ್ದಂತೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Edited By : Somashekar
Kshetra Samachara

Kshetra Samachara

13/10/2022 05:44 pm

Cinque Terre

31.56 K

Cinque Terre

3

ಸಂಬಂಧಿತ ಸುದ್ದಿ