ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ತೋಳನಕೆರೆ ಅಭಿವೃದ್ಧಿ ವಿಷಯವು ಬಿಜೆಪಿಯಲ್ಲಿ ಕ್ರೆಡಿಟ್ ವಾರ್‌ಗೆ ಕಾರಣವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಆಕರ್ಷಕವಾಗಿ ಅಭಿವೃದ್ಧಿಗೊಂಡಿರುವ ಕೆರೆ ಉದ್ಘಾಟನೆಗೆ ಸಿದ್ಧವಾಗಿದ್ದು, ಪ್ರವೇಶ ದ್ವಾರದಲ್ಲಿ ಇತ್ತೀಚಿಗೆ ಅಳವಡಿಸಿರುವ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರ ಫ್ಲೆಕ್ಸ್ ಇಂತಹದೊಂದು ಚರ್ಚೆ ಹುಟ್ಟು ಹಾಕಿದೆ.
ಹೌದು. ಸಂಸದರು ಹಾಗೂ ಶಾಸಕರ ವಿಶೇಷ ಆಸಕ್ತಿ ಪ್ರಯತ್ನದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ತೋಳನಕೆರೆ ಅಭಿವೃದ್ಧಿ ಎಂಬ ಬರಹವಿರುವ ಫ್ಲೆಕ್ಸ್‌ನಲ್ಲಿ ಜಗದೀಶ ಶೆಟ್ಟರ್ ಅವರ ಫೋಟೋ ಇಲ್ಲದಿರುವುದು ಶೆಟ್ಟರ್ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಕುರಿತ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. ಕೆರೆಗೆ ಹೊಸ ರೂಪ ನೀಡುವಲ್ಲಿ ಶೆಟ್ಟರ್ ಕೊಡುಗೆ ಹೆಚ್ಚು ಎಂದು ವಾದಿಸುತ್ತಿರುವ ಅವರ ಅಭಿಮಾನಿಗಳು, ಫ್ಲೆಕ್ಸ್‌ನಲ್ಲಿ ಚಿತ್ರ ಹಾಕದಿರುವುದು ಲಿಂಗಾಯತ ಬಣಜಿಗ ಸಮುದಾಯದ ನಾಯಕನನ್ನು ತುಳಿಯುವ ತಂತ್ರವಾಗಿದೆ ಎಂದು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ಕೆಲ ನಾಯಕರು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆರೆ ಅಭಿವೃದ್ಧಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಪಾತ್ರ ದೊಡ್ಡದು. ಫ್ಲೆಕ್ಸ್‌ನಲ್ಲಿ ಅವರ ಚಿತ್ರ ಕೈಬಿಟ್ಟಿರುವುದು ಮಾಜಿ ಮುಖ್ಯಮಂತ್ರಿಗೆ ಮಾಡಿದ ಅವಮಾನವಾಗಿದೆ ಎಂದು ಬಿಜೆಪಿ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ಆಯಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರು ಮತ್ತು ಸಂಸದರ ಭಾವಚಿತ್ರ ಹಾಕುವುದು ಸಾಮಾನ್ಯ. ಅದರಂತೆ ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವ ತೋಳನಕೆರೆ ಅಭಿವೃದ್ಧಿಯ ಫ್ಲೆಕ್ಸ್ ಹಾಕಲಾಗಿದೆ. ಬಹುಶಃ ಸ್ಮಾರ್ಟ್ ಸಿಟಿಯವರೇ ಹಾಕಿಸಿರುತ್ತಾರೆ. ಇದು ಚರ್ಚಾರ್ಹ ವಿಷಯವೇ ಅಲ್ಲ. ಶೆಟ್ಟರ್ ಸಾಹೇಬರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕೆಲವರು ಅನಗತ್ಯ ಚರ್ಚೆಗಳನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಪಶ್ಚಿಮ ವಿಧಾನಸಭಾ ಕ್ಷೇತ್ರದ ಅರವಿಂದ ಬೆಲ್ಲದ ಸಹ ಸ್ಪಷ್ಟನೆ ನೀಡಿದ್ದಾರೆ.
Kshetra Samachara
28/09/2022 12:49 pm