ಧಾರವಾಡ: ಇಡೀ ದೇಶ ಬದಲಾವಣೆಯತ್ತ ಸಾಗಿದೆ. ಹೊಸ ಹೊಸ ಸಂಶೋಧನೆ, ಆವಿಷ್ಕಾರಗಳಿಗೆ ಒತ್ತು ನೀಡಲಾಗುತ್ತಿದೆ. ತಂತ್ರಜ್ಞಾನ ಬೆಳೆಯುತ್ತಿದೆ. ಈ ತಂತ್ರಜ್ಞಾನದಲ್ಲಿ ಭಾರತದ ಯುವಕರು ಹೆಚ್ಚು ನಿಪುಣರಾಗಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಧಾರವಾಡದಲ್ಲಿ ನಿರ್ಮಾಣಗೊಂಡ ಐಐಐಟಿ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಐಐಐಟಿ ಕೇಂದ್ರವನ್ನು ಉದ್ಘಾಟನೆಗೊಳಿಸಿದ್ದು ನನಗೆ ಖುಷಿ ತಂದಿದೆ. ತಂತ್ರಜ್ಞಾನ ಇನ್ನಷ್ಟು ಉಜ್ವಲವಾಗಬೇಕಿದೆ. ಪ್ರಧಾನಮಂತ್ರಿಗಳು ಈ ಕಟ್ಟಡದ ಶಿಲಾನ್ಯಾಸ ನೆರವೇರಿಸಿದ್ದರು. ಇಂದು ನಾನು ಉದ್ಘಾಟನೆ ಮಾಡಿದ್ದೇನೆ. ನಮ್ಮ ದೇಶದ ಯುವಕರು ತಂತ್ರಜ್ಞಾನದಲ್ಲಿ ಹೆಚ್ಚು ನಿಪುಣರಾಗಬೇಕು ಎಂದೇ ಈ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ ಎಂದರು.
ನಮ್ಮ ದೇಶದಲ್ಲಿ ಸಂಶೋಧನೆಗೆ ಮಹತ್ವ ಕೊಡಲಾಗುತ್ತಿದೆ. ಅದಕ್ಕಾಗಿಯೇ ಹೊಸ ಶಿಕ್ಷಣ ನೀತಿಯನ್ನು ತರಲಾಗಿದೆ. ನ್ಯಾನೋ, ಬಯೋ ಸೇರಿ ಹಲವು ವಿಷಯಗಳ ಬಗ್ಗೆ ಒತ್ತು ನೀಡಲಾಗುತ್ತಿದೆ. ರೋಬೋಟ್ ಬಗ್ಗೆ ಐಐಐಟಿಯಲ್ಲಿ ಸಂಶೋಧನೆ ನಡೆದಿದೆ. ಇದರ ಲಾಭವನ್ನು ಈ ಭಾಗದ ಯುವಕರು ಪಡೆದುಕೊಳ್ಳಬೇಕು. ಎಲ್ಲರೂ ಒಂದಾಗಿ ಹೊಸ ದಿಕ್ಕಿನತ್ತ ಸಾಗಿದರೆ ಗೆಲುವು ಸಾಧ್ಯ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಷ್ಟ್ರಪತಿಗಳು ಆಸಕ್ತಿ ವಹಿಸಿ ಐಐಐಟಿ ಕೇಂದ್ರದ ಉದ್ಘಾಟನೆಗೆ ಬಂದಿದ್ದಾರೆ. ರಾಷ್ಟ್ರಪತಿಗಳು ಬುಡಕಟ್ಟು ಜನಾಂಗದಿಂದ ಬಂದವರು. ಅವರು ಅತ್ಯಂತ ಸರಳಜೀವಿಗಳು. ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗ ಅವರು ದೇವಸ್ಥಾನವನ್ನು ಸ್ವಚ್ಛಗೊಳಿಸುತ್ತಿದ್ದರು. ಇಂದು ಅಂತಹ ಸರಳ ರಾಷ್ಟ್ರಪತಿ ನಮ್ಮ ಐಐಐಟಿ ಕೇಂದ್ರವನ್ನು ಉದ್ಘಾಟನೆ ಮಾಡಿದ್ದಾರೆ ಎಂದರು.
ದೇಶಕ್ಕೆ ಇಂದು ಐಐಐಟಿ ಬಹಳ ಅವಶ್ಯಕತೆ ಇದೆ. ಐಟಿ ಬಿಟಿ ಹೆಚ್ಚಿಗೆ ಇದ್ದದ್ದು ನಮ್ಮ ದೇಶದಲ್ಲಿ. ನಮ್ಮ ದೇಶ ಅಭಿವೃದ್ಧಿಯ ದೇಶ. ಈ ದೇಶದ ಶಕ್ತಿ ನಮ್ಮ ಯುವಕರು. ಪ್ರಧಾನಿಗಳು ಕೂಡ ಇದಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಯುವಕರು ತಾವೂ ಬೆಳೆದು ದೇಶವನ್ನೂ ಬೆಳೆಸಬೇಕು. ಈ ಐಐಐಟಿ ಕೇಂದ್ರಕ್ಕೆ ರೈತರು ಜಮೀನು ಕೊಟ್ಟಿದ್ದಾರೆ. ಜಮೀನು ಪಡೆದುಕೊಳ್ಳುವುದು ಕಷ್ಟ. ಮೊದಲು ಈ ಜಮೀನಿನಲ್ಲಿ ಬೀಜ ಬಿತ್ತುತ್ತಿದ್ದರು. ಈಗ ಅಕ್ಷರ ಬಿತ್ತುವ ಕೆಲಸ ನಡೆಯುತ್ತಿದೆ ಎಂದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ ಸಮಾರಂಭದಲ್ಲಿ ಮಾತನಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/09/2022 08:08 am