ಧಾರವಾಡ: ಅಡುಗೆ ಸಹಾಯಕರ ಮೂರು ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಡುಗೆ ಸಹಾಯಕರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜನಜಾಗೃತಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಧಾರವಾಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಸುಮಾರು 150 ಜನ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಅಡುಗೆ ಸಹಾಯಕರಿಗೆ ಮೂರು ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ. ವೇತನ ಇರದೇ ಇರುವುದರಿಂದ ಜೀವನ ನಡೆಸುವುದು ಕಷ್ಟಕರವಾಗಿದೆ.
ಈ ಕುರಿತು ವಿಚಾರಿಸಿದರೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಮತಿ ಎಂ.ಬಿ.ಸಣ್ಣೇರಿ ಹಾಗೂ ಹಲವು ಹಾಸ್ಟೆಲ್ ವಾರ್ಡನ್‌ಗಳು ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಹಿಂದೆ ಕೂಡ ಹಲವು ಬಾರಿ ಪ್ರತಿಭಟನೆ ನಡೆಸಿದಾಗ ಕೇವಲ ನಾಮಕ್‌ವಾಸ್ತೆ ಎಂಬಂತೆ ಒಂದು ತಿಂಗಳ ಸಂಬಳ ನೀಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ಕಳೆದ ಹಲವು ವರ್ಷದಿಂದ ಪ್ರತಿ ತಿಂಗಳು ಸಂಬಳ ನೀಡದೇ ಅನ್ಯಾಯ ಎಸಗುತ್ತಿದ್ದಾರೆ.
ಅಡುಗೆ ಸಹಾಯಕರ ಹೊರಗುತ್ತಿಗೆ ಪಡೆದಿರುವ ಭಾರತ್ ಎಕ್ಸ್ ಸರ್ವಿಸ್ ಮ್ಯಾನ್ ಏಜೆನ್ಸಿ ವಿರುದ್ಧ ಸೂಕ್ತವಾದ ಕ್ರಮ ಕೈಗೊಂಡು ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಕೂಡಲೇ ಅಡುಗೆ ಸಹಾಯಕರ ಬಾಕಿ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
Kshetra Samachara
22/09/2022 04:51 pm