ವರದಿ: ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯೆಯರಿಗೆ ಅಧಿಕಾರ ದೂರವಾಗಿದೆ. ಮಹಾನಗರ ಪಾಲಿಕೆಯಲ್ಲಿ ಶೇ. 50ಕ್ಕೂ ಹೆಚ್ಚು ಸದಸ್ಯೆಯರು ಇದ್ದಾರೆ. ಇವರಲ್ಲಿ ಹೆಚ್ಚಿನವರ ಅಧಿಕಾರವನ್ನು ಅವರ ಪತಿ ಅಥವಾ ಮಕ್ಕಳು ನಿರ್ವಹಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮೊನ್ನೆ ಮೊನ್ನೆಯಷ್ಟೆ ನೀರು ಸರಬರಾಜು ನಿರ್ವಹಣೆ ನಗರದ ಖಾಸಗಿ ಹೋಟೆಲ್‌ನಲ್ಲಿ ಎಲ್‌ಅಂಡ್‌ಟಿ ಕಂಪನಿಯವರು ಕರೆದಿದ್ದ ಸಭೆಯಲ್ಲಿ, ಪಾಲಿಕೆ ಸದಸ್ಯೆಯರೊಂದಿಗೆ ಅವರ ಪತಿ ಇಲ್ಲವೇ ಮಕ್ಕಳು ಅಥವಾ ತಂದೆ ಭಾಗವಹಿಸಿದ್ದು ಇದಕ್ಕೆ ನಿದರ್ಶನ.
82 ಜನ ಪಾಲಿಕೆ ಸದಸ್ಯರನ್ನು ಆ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಸದಸ್ಯೆಯರ ಸಂಬಂಧಿಕರು ಸೇರಿ 115ಕ್ಕೂ ಹೆಚ್ಚು ಜನರು ಸಭೆಯಲ್ಲಿ ಭಾಗವಹಿಸಿದ್ದರು. ಈ ಹಿಂದೆಯೂ ಪತಿಯಂದಿರೇ ವಾರ್ಡ್‌ಗಳಲ್ಲಿ ಅಧಿಕಾರ ಚಲಾಯಿಸುತ್ತಿದ್ದರು. ಈ ವ್ಯವಸ್ಥೆ ಈಗಲೂ ಮುಂದುವರಿದಿದೆ. ಕೆಲ ವಾರ್ಡ್‌ಗಳಲ್ಲಿ ಸಾಮಾನ್ಯ ಸಭೆಗಳಿಗೆ ಹಾಜರಾಗುವುದು ಹಾಗೂ ಕಡತಗಳಿಗೆ ಸಹಿ ಮಾಡುವುದಷ್ಟೇ ಸದಸ್ಯೆಯರ ಕಾರ್ಯವಾಗಿ ಉಳಿದುಕೊಂಡಿದೆ.
ಇನ್ನು ಅಧಿಕಾರಿಗಳಿಗೂ ಸಹ ಈ ಅವ್ಯವಸ್ಥೆ ಕರಗತವಾದಂತೆ ಆಗಿದೆ. ಅವರು ಸಹ ವಾರ್ಡ್‌ಗಳಲ್ಲಿ ಕೆಲಸಗಳು ಇದ್ದರೆ ನೇರವಾಗಿ ಅವರ ಪತಿಗೆ ಮೊಬೈಲ್ ಕರೆ ಮಾಡಿ ಚರ್ಚಿಸುತ್ತಾರೆ. ಒಂದು ರೀತಿಯಲ್ಲಿ ಹೆಚ್ಚಿನ ಸದಸ್ಯೆಯರು ಉತ್ಸವ ಮೂರ್ತಿಯಂತೆ ಆಗಿಬಿಟ್ಟಿದ್ದಾರೆ. ಅವರು ನೇರವಾಗಿ ಯಾವುದೇ ಅಧಿಕಾರ ಚಲಾಯಿಸದಂತ ಸ್ಥಿತಿ ಇದೆ. ಸಾಮಾನ್ಯ ಸಭೆಗಳಲ್ಲಿಯೂ ಅವರು ತಮ್ಮ ವಾರ್ಡ್‌ಗಳ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದೇ ಅಪರೂಪ. ಕೆಲವರಂತೂ ತಮ್ಮ ಅಧಿಕಾರದ ಐದು ವರ್ಷಗಳಲ್ಲಿ ಒಮ್ಮೆಯೂ ಮಾತನಾಡುವುದೇ ಇಲ್ಲ.
ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯ ಪೂರ್ವಭಾವಿ ಸಭೆಯಲ್ಲಿಯೂ ಕೆಲ ಸದಸ್ಯೆಯರ ಪತಿಯರು ಪಾಲ್ಗೊಂಡಿದ್ದರು. ಆಡಳಿತ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಈ ಸಮಸ್ಯೆ ಇದೆ.
ಎರಡೂ ಪಕ್ಷಗಳಲ್ಲಿ ಮಹಿಳೆಯರು ಪಾಲಿಕೆ ಸದಸ್ಯೆಯಾಗಿ ಚುನಾಯಿತರಾದರೂ, ಅಧಿಕಾರದಿಂದ ವಂಚಿತರಾಗಿರುವುದು ಬಹಿರಂಗ ಸತ್ಯ. ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆ, ಕಾಯ್ದೆ ಹಾಗೂ ಮತ್ತಿತರ ವಿಷಯಗಳ ಬಗ್ಗೆ ಸದಸ್ಯೆಯರಿಗೆ ತರಬೇತಿ ನೀಡುವ ಅಗತ್ಯವಿದೆ. ಇಲ್ಲದಿದ್ದರೆ, ಮಹಿಳಾ ಮೀಸಲಾತಿಗೆ ಅರ್ಥವೇ ಇಲ್ಲದಂತೆ ಆಗುತ್ತದೆ.
Kshetra Samachara
07/08/2022 10:36 am