ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 'ಬೆಲ್ಲದ'ಗೆ ಯಾರುಣಿಸಲಿದ್ದಾರೆ ಕಹಿ?

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಬಿಜೆಪಿ ಭದ್ರಕೋಟೆ ಎಂದೇ ಹೇಳಲಾಗುತ್ತಿರುವ ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಪ್ರಸಕ್ತ ವರ್ಷದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಹೌದು! ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧೆ ನಡೆಸಲು ನಾಲ್ಕೈದು ಜನ ಅಭ್ಯರ್ಥಿಗಳು ರೆಡಿಯಾಗಿದ್ದು, ಇದರಲ್ಲಿ ಓರ್ವ ಅಭ್ಯರ್ಥಿಗೆ ಮಾತ್ರ ಪಕ್ಷ ಟಿಕೆಟ್ ನೀಡಿ ಕಣಕ್ಕಿಳಿಸಲಿದೆ. ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಹಾಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ವಿರುದ್ಧ ಸ್ಪರ್ಧೆ ನಡೆಸಲು ಮಾಜಿ ಮೇಯರ್ ದೀಪಕ ಚಿಂಚೋರೆ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಅಲ್ಲದೇ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾಗಿರುವ ಯುವ ಕಾಂಗ್ರೆಸ್ ಮುಖಂಡ ಡಾ.ಮಯೂರ ಮೋರೆ ಕೂಡ ತೆರೆಮರೆಯ ಕಸರತ್ತು ನಡೆಸಿದ್ದಾರೆ.

ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ಅಂತಿಮ. ಈ ಪ್ರಾಬಲ್ಯವನ್ನು ತಮ್ಮತ್ತ ಸೆಳೆಯುವುದಕ್ಕಾಗಿ ಇತ್ತ ಜೆಡಿಎಸ್‌ ಹಾಗೂ ಲಿಂಗಾಯತ ಮುಖಂಡ ಗುರುರಾಜ ಹುಣಸಿಮರದ ಕೂಡ ಸ್ಪರ್ಧೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ಕಾಲದಿಂದಲೂ ಈ ಕ್ಷೇತ್ರದಲ್ಲಿ ಬಿಜೆಪಿ ಬಿಟ್ಟು ಯಾವೊಬ್ಬ ಪಕ್ಷದ ಅಭ್ಯರ್ಥಿ ಕೂಡ ಗೆಲುವು ಸಾಧಿಸಿಲ್ಲ. ಆದರೆ, ಪ್ರಸಕ್ತ ವರ್ಷ ಶತಾಯಗತಾಯ ಬೆಲ್ಲದಗೆ ಕಹಿ ಉಣ್ಣಿಸಲೇಬೇಕು ಎಂದು ಕಾಂಗ್ರೆಸ್ ಮುಖಂಡರು ಟೊಂಕ ಕಟ್ಟಿ ನಿಂತಿದ್ದಾರೆ.

ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ನಡೆಸಲು ದೀಪಕ ಚಿಂಚೋರೆ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಸಾಕಷ್ಟು ಜನಸಂಪರ್ಕ ಹೊಂದಿರುವ ಚಿಂಚೋರೆ, ಈಗಾಗಲೇ ಹಲವಾರು ಜನಪರ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಗಮನಸೆಳೆದಿದ್ದಾರೆ. ಇನ್ನು ಪಿ.ಎಚ್.ನೀರಲಕೇರಿ ಅವರೂ ತಾವೂ ಏನು ಕಡಿಮೆ ಇಲ್ಲ ಎನ್ನುವಂತೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ರಾಜ್ಯ ನಾಯಕರ ಗಮನಸೆಳೆಯುತ್ತಿದ್ದಾರೆ.

ನಾಗರಾಜ ಗೌರಿ ಕೂಡ ತಮ್ಮದೇ ಶೈಲಿಯಲ್ಲಿ ಟಿಕೆಟ್ ಪಡೆಯಲು ಎಲ್ಲ ರೀತಿಯಿಂದ ಕಸರತ್ತು ನಡೆಸುತ್ತಿದ್ದಾರೆ. ಡಾ.ಮಯೂರ ಮೋರೆ ಅವರು ಜಾರಕಿಹೊಳಿ ಕುಟುಂಬದೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಆ ಮೂಲಕ ತಾವೂ ಟಿಕೆಟ್ ಪಡೆದುಕೊಳ್ಳಲು ತೆರೆಮರೆಯ ಕಸರತ್ತು ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಏನೇ ಆಗಲಿ ನಾಲ್ಕು ಜನ ಈಗಾಗಲೇ ಚುನಾವಣಾ ಸಿದ್ಧತೆ ಮಾಡಿಕೊಂಡಿದ್ದು, ಇದರಲ್ಲಿ ಒಬ್ಬರನ್ನು ಮಾತ್ರ ಪಕ್ಷ ಆಯ್ಕೆ ಮಾಡಲಿದ್ದು, ಕಾಂಗ್ರೆಸ್‌ನಿಂದ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುದೇ ಕುತೂಹಲದ ಸಂಗತಿಯಾಗಿದೆ.

Edited By : Vijay Kumar
Kshetra Samachara

Kshetra Samachara

05/08/2022 10:00 am

Cinque Terre

11.96 K

Cinque Terre

15

ಸಂಬಂಧಿತ ಸುದ್ದಿ