ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದು, ರಾಜಕೀಯ ಚಟುವಟಿಕೆ ಈಗಿನಿಂದಲೇ ಚುರುಕು ಪಡೆದುಕೊಂಡಿವೆ. ಅದರಲ್ಲೂ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರ ಗರಿಗೆದರಿದ್ದು, ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಹೌದು! ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿ ಸಚಿವರಾಗಿದ್ದಂತವರು. ಆದರೆ, ಅವರು ಇದೀಗ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಜೈಲುವಾಸ ಅನುಭವಿಸಿ ಬಂದಿದ್ದಾರೆ. ಅವರಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನ್ಯಾಯಾಲಯ ಕೂಡ ನಿರ್ಬಂಧ ಹೇರಿದೆ. ಜಿಲ್ಲಾ ಪ್ರವೇಶಕ್ಕೆ ನಿರ್ಬಂಧವಿದ್ದರೂ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಹುಮ್ಮಸ್ಸು ಹೊಂದಿದ್ದಾರೆ. ಒಂದು ವೇಳೆ ಇದರಲ್ಲಿ ವ್ಯತ್ಯಾಸವುಂಟಾದರೆ ಅವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ ಅವರನ್ನು ಕಣಕ್ಕಿಳಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಶಿವಲೀಲಾ ಕುಲಕರ್ಣಿ ಕೂಡ ಈಗಾಗಲೇ ರಾಜಕೀಯ ಚಟುವಟಿಕೆಯನ್ನು ಆರಂಭಿಸಿದ್ದಾರೆ.
ವಿನಯ್ ಕುಲಕರ್ಣಿ ಅಥವಾ ಶಿವಲೀಲಾ ಕುಲಕರ್ಣಿ ಇಬ್ಬರಲ್ಲಿ ಒಬ್ಬರು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಳಿಯುವುದಂತೂ ಪಕ್ಕಾ. ಆದರೆ, ಇವರಿಬ್ಬರ ವಿರುದ್ಧ ಈಗ ಇನ್ನೋರ್ವ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಹುರುಪಿನಲ್ಲಿದ್ದಾರೆ. ಇಸ್ಮಾಯಿಲ್ ತಮಟಗಾರ ಈಗಾಗಲೇ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮದೇ ಆದ ಪಡೆಯನ್ನು ಹೊಂದಿದ್ದಾರೆ. ನಿರಂತರವಾಗಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರವಾಸ ನಡೆಸುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೊಡಿ ಎಂದು ಇಸ್ಮಾಯಿಲ್ ಈಗಾಗಲೇ ಲಾಬಿ ನಡೆಸಿದ್ದಾರೆ. ಒಂದು ವೇಳೆ ಇವರಿಗೆ ಟಿಕೆಟ್ ಕೈ ತಪ್ಪಿದ್ದೇ ಆದಲ್ಲಿ ಇವರು ಜೆಡಿಎಸ್ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಂತೂ ಪಕ್ಕಾ.
ಒಟ್ಟಾರೆಯಾಗಿ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಟಿಕೆಟ್‌ಗಾಗಿ ಲಾಬಿ ನಡೆಸಲಾಗುತ್ತಿದ್ದು, ಅಧಿಕೃತವಾಗಿ ಯಾರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂಬುದನ್ನು ಪಕ್ಷದ ಮುಖಂಡರೇ ಸ್ಪಷ್ಟಪಡಿಸಲಿದ್ದಾರೆ.
Kshetra Samachara
04/08/2022 09:42 am