ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಇವರು ಸುಮಾರು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಸರ್ಕಾರಕ್ಕೆ ಎಷ್ಟೋ ಬಾರಿ ಮನವಿ ನೀಡಿದ್ರೂ ಕೂಡ ಕ್ಯಾರೆ ಎನ್ನದ ಸರ್ಕಾರದ ವಿರುದ್ಧ ಇಂದು ಬೃಹತ್ ಸಮಾವೇಶ ಮಾಡಿದ್ದಾರೆ.
ಹೌದು…. ಹೀಗೆ ಸಾವಿರಾರು ಸಂಖ್ಯೆಯಲ್ಲಿ ಒಂದುಗೂಡಿ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಇವರು ಪಂಚಮಸಾಲಿ ಸಮುದಾಯದವರು. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು, ಸುಮಾರು ವರ್ಷಗಳಿಂದ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ ಸಾಕಷ್ಟು ಮನವಿ ಸಲ್ಲಿಸಿದ್ದಾರೆ. ಆದ್ರೆ ಸರ್ಕಾರ ಮಾತ್ರ ಇವರ ಮನವಿಗೆ ಡೋಂಟ್ ಕೇರ್ ಅಂದಿದ್ದಕ್ಕೆ ಇಂದು ಸಾವಿರಾರು ಸಂಖ್ಯೆಯಲ್ಲಿ ಪಂಚಮಸಾಲಿ ಜನರು ರಸ್ತೆಗಿಳಿದು ಹೋರಾಟ ಮಾಡುವುದರ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ..
ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಯ ಪಂಚಮಸಾಲಿ ಸಮಾಜದವರು ಮೀಸಲಾತಿಗಾಗಿ ನೆಹರೂ ಮೈದಾನದಲ್ಲಿ ಸಭೆಯನ್ನು ಹಮ್ಮಿಕೊಂಡಿದ್ದರು. ಈ ಸಭೆಯಲ್ಲಿ ಪಂಚಮಸಾಲಿ ರಾಜಕೀಯ ನಾಯಕರು ಕೂಡ ಭಾಗವಹಿಸಿದ್ದರು. ಸಭೆಯ ನಂತರ ನೆಹರೂ ಮೈದಾನದಿಂದ ರಾಣಿ ಚೆನ್ನಮ್ಮ ವೃತ್ತದವರೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಪಾದಯಾತ್ರೆ ಮಾಡಿದ್ರು..
ಈ ಸಮಾವೇಶದ ಮೂಲಕ ಸರ್ಕಾರಕ್ಕೆ ಆಗಸ್ಟ್ 22 ರೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡದಿದ್ದರೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆ ಮುಂದೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದ್ದಾರೆ..
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/07/2022 04:46 pm