ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ನಾಲ್ಕನೇ ಬಾರಿ ಮಾತು ಕೊಟ್ಟಿದ್ದಾರೆ. ಇದನ್ನು ಸರ್ಕಾರಕ್ಕೆ ನೆನಪಿಸುವ ವಿಚಾರವಾಗಿ ಜುಲೈ 30 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೀಸಲಾತಿ ವಿಚಾರವಾಗಿ ನಿರಂತರ ಹೋರಾಟ ಮಾಡಲಾಗುತ್ತಿದೆ. ಪರಿಣಾಮ ಮುಖ್ಯಮಂತ್ರಿಗಳು ಮೂರು ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ಇದರಿಂದಾಗಿಯೇ ಶಿಗ್ಗಾಂವ್‌ನ ಸಿಎಂ ಮನೆಮುಂದೆಯೇ ಧರಣಿ ನಡೆಸಲು ತಿರ್ಮಾಣ ಮಾಡಲಾಗಿತ್ತು. ಆದರೆ ಮುಖ್ಯಮಂತ್ರಿಗಳು ನಮ್ಮ ಸಮಾಜದ ಸಚಿವರ ಮೂಲಕ ಸಂಧಾನಕ್ಕೆ ಮುಂದಾಗಿ ಎರಡು ತಿಂಗಳ ಕಾಲಾವಕಾಶ ಕೇಳಿದೆ. ಅದರಂತೆ ಅಗಸ್ಟ್ 22 ರೊಳಗೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನೆನಪಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಅಂದು ನೆಹರೂ ಮೈದಾನದಿಂದ ಚೆನ್ನಮ್ಮ ವೃತ್ತದವರೆಗೆ ಮೆರವಣಿಗೆ ಬಂದು ಅಲ್ಲಿ ಧರಣಿ ನಡೆಸಲಾಗುವುದು. ಸುಮಾರು 10 ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಸಚಿವ ಬಸನಗೌಡ ಯತ್ನಾಳ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದು ಸ್ವಾಮೀಜಿ ಹೇಳಿದರು.
Kshetra Samachara
27/07/2022 12:42 pm