ಧಾರವಾಡ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ದೇಶದ ಇತಿಹಾಸದಲ್ಲೇ ಇಷ್ಟು ಬೇಗ ಬಿ ರಿಪೋರ್ಟ್ ಯಾರೂ ಹಾಕಿರಲಿಲ್ಲ. ಈ ಸರ್ಕಾರಕ್ಕೆ ನಾಚಿಕೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರ ಮೇಲೆ ಎಫ್‌ಐಆರ್ ಮಾಡಿ ಅವರನ್ನು ಬಂಧಿಸಿ ಎಂದು ನಾವು ಆಗ್ರಹಿಸಿದ್ದೇವು. ಆದರೆ, ಸರ್ಕಾರ ಆ ಕೆಲಸ ಮಾಡಿಲ್ಲ. ಗುತ್ತಿಗೆದಾರ ಸಂತೋಷ್ ಅವರು ನನ್ನ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ವಾಟ್ಸಪ್ ಮೆಸೇಜ್ ಮಾಡಿದ್ದರು. ಈ ಸರ್ಕಾರಕ್ಕೆ ನಾಚಿಕೆ ಇಲ್ಲ. ಈ ಸಾವಿಗೆ ಈಶ್ವರಪ್ಪ ಕಾರಣ ಅಲ್ಲ ಎನ್ನುತ್ತಿದೆ ಎಂದರು.
ಈಶ್ವರಪ್ಪ ಮತ್ತೆ ಈಗ ಮಂತ್ರಿಯಾಗಲು ಸಜ್ಜಾಗಿದ್ದಾರೆ. ರಾಜ್ಯದ ಅನೇಕ ಕಡೆಗಳಲ್ಲಿ ವಿಪರೀತ ಮಳೆಯಾಗಿ ಜನ ತೊಂದರೆಯಲ್ಲಿದ್ದಾರೆ. ಯಾವ ಸಚಿವರೂ ಜನರ ಗೋಳು ಕೇಳುವ ಕೆಲಸ ಮಾಡುತ್ತಿಲ್ಲ. ಸಿಎಂ ದೆಹಲಿಗೆ ಹೋಗಿ ಕುಳಿತಿದ್ದಾರೆ. ಇವರಿಗೆ ಜನರ ಮೇಲೆ ಕನಿಕರ ಇಲ್ಲ. ಇದು ನಿರ್ಜೀವ ಸರ್ಕಾರ. ಈ ಸರ್ಕಾರ ಗುಪ್ತಚರ ಇಲಾಖೆಯಿಂದ ಮಾಹಿತಿ ತರಿಸಿಕೊಂಡಿದೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೇವಲ 60 ಸೀಟುಗಳನ್ನು ಗೆಲ್ಲಲಿದೆ. ಅದಕ್ಕಾಗಿ ಸಮಾಜ ಒಡೆಯುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ. ಜನ ಸದ್ಯ ಬದಲಾವಣೆ ಬಯಸಿದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ರಾಹುಲ್ ಗಾಂಧಿ 150 ಸೀಟು ಟಾರ್ಗೆಟ್ ಕೊಟ್ಟಿದ್ದಾರೆ. ನಾವು ಅಷ್ಟು ಸೀಟು ಗೆದ್ದೇ ಗೆಲ್ಲುತ್ತೇವೆ ಎಂದರು.
ಕೇಂದ್ರ ಸರ್ಕಾರ ಸಿಬಿಐ, ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನ್ಯಾಷನಲ್ ಹೆರಾಲ್ಡ್ ಕೇಸ್ ಮತ್ತೆ ತೆಗೆದು ಹೆದರಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಕಾಂಗ್ರೆಸ್ ಹೆದರುವುದಿಲ್ಲ. ಇದೇ 26 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸಾಮೂಹಿಕವಾಗಿ ಈ ಬಾರಿ ನಾವು ಚುನಾವಣೆಗೆ ಹೋಗುತ್ತೇವೆ. ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂದರು
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/07/2022 11:19 am