ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಅಂತಾರೆ. ಆದರೆ ರಾಷ್ಟ್ರಧ್ವಜ ವಿಚಾರದಲ್ಲಿ ಮೇಕ್ ಇನ್ ಚೀನಾ ಅಂತಾರೆ. ಪಾಲಿಸ್ಟರ್ ಧ್ವಜಕ್ಕೆ ಅವಕಾಶ ನೀಡುವ ಮೂಲಕ ಖಾದಿಗೆ ಅಪಮಾನ ಮಾಡಿದ್ದಾರೆ. ಬ್ರಿಟಿಷರನ್ನು ದೇಶದಿಂದ ಓಡಿಸಲು ದೊಡ್ಡ ಅಸ್ತ್ರವಾಗಿದ್ದೇ ಖಾದಿ ಎಂದು ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಖಾದಿ ಗ್ರಾಮೋದ್ಯೋಗಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಖಾದಿಗೆ ಕೇಂದ್ರ ಸರ್ಕಾರದಿಂದ ದ್ರೋಹವಾಗಿದೆ. ಪಾಲಿಸ್ಟರ್ ಧ್ವಜ ಪರಿಸರ ಸ್ನೇಹಿ ಅಲ್ಲ. ನಮ್ಮ ರಾಷ್ಟ್ರಧ್ವಜವನ್ನು ನಮ್ಮ ದೇಶದಲ್ಲಿ ತಯಾರು ಮಾಡುತ್ತೇವೆ. ಅದನ್ನು ಬಿಟ್ಟು ಬೇರೆ ದೇಶಕ್ಕೆ ಟೆಂಡರ್ ನೀಡಿರುವುದು ನಮಗೆ ದೊಡ್ಡ ಅಪಮಾನ ಎಂದು ಅವರು ಕಿಡಿ ಕಾರಿದರು.
ನಮ್ಮ ಸಂಸ್ಕೃತಿ, ಪರಂಪರೆಗೆ ಧಕ್ಕೆ ತಂದರೆ ಸುಮ್ಮನೆ ಇರುವುದಿಲ್ಲ. ಪಾಲಿಸ್ಟರ್‌ಗೆ ಅವಕಾಶ ನೀಡಿದ್ದರಿಂದ ಖಾದಿ ಗ್ರಾಮೋದ್ಯೋಗದಲ್ಲಿ ಸಿದ್ಧವಾದ ಧ್ವಜಗಳು ಹಾಗೇ ಉಳಿದಿವೆ. ಈ ಧ್ವಜವನ್ನು ನಮ್ಮ ಕಾಂಗ್ರೆಸ್ ಪಕ್ಷ ಖರೀದಿ ಮಾಡಲಿದೆ. ಅದಕ್ಕಿಂತಲೂ ಮುಖ್ಯವಾಗಿ ಖಾದಿ ಗ್ರಾಮೋದ್ಯೋಗ ಉಳಿಯಬೇಕಿದೆ. ಅದಕ್ಕಾಗಿ ಕಾಂಗ್ರೆಸ್ ಸಂಘಟಿತ ಹೋರಾಟ ಮಾಡುತ್ತದೆ. ಯಾವುದೇ ಕಾರಣಕ್ಕೂ ಪಾಲಿಸ್ಟರ್ ಬಟ್ಟೆಗೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/07/2022 01:56 pm