ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡ ಸ್ವಚ್ಛ ಸರ್ವೇಕ್ಷಣಾ ಅಭಿಯಾನಕ್ಕೆ ಚಿತ್ರನಟ ಅನಿರುದ್ಧ ಜತ್ಕರ್ ಹಾಗೂ ಹಿರಿಯ ಕಲಾವಿದ ಪದ್ಮಶ್ರೀ ಪುರಸ್ಕೃತ ಪಂ.ವೆಂಕಟೇಶ ಕುಮಾರ್ ರಾಯಭಾರಿಗಳಾಗಿ ಆಯ್ಕೆಯಾಗಿದ್ದಾರೆ ಎಂದು ಮೇಯರ್ ಈರೇಶ ಅಂಚಟಗೇರಿ ತಿಳಿಸಿದರು.
ಧಾರವಾಡದಲ್ಲಿಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 23ರಿಂದ 25ರ ವರೆಗೆ ಸ್ವಚ್ಛತೆ ಕುರಿತು ಸರಣಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಹುಬ್ಬಳ್ಳಿ- ಧಾರವಾಡ ಸ್ವಚ್ಛ ನಗರಕ್ಕೆ ಮಹಾನಗರ ಪಾಲಿಕೆ ಸಂಕಲ್ಪ ಮಾಡಿದೆ. ಮೊದಲ ಹಂತದ ಈ ಸ್ವಚ್ಛತಾ ಅಭಿಯಾನದ ಭಾಗವಾಗಿ ಹುಬ್ಬಳ್ಳಿ- ಧಾರವಾಡದಲ್ಲಿ ನಟ ಅನಿರುದ್ಧ, ಕಲಾವಿದ ಪಂ. ವೆಂಕಟೇಶಕುಮಾರ ರಾಯಭಾರಿಗಳಾಗಿ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಜೂ. 23 ರಂದು ಹುಬ್ಬಳ್ಳಿಯ ಬೆಂಗೇರಿಯಲ್ಲಿ ಪೌರಕಾರ್ಮಿಕರ ಜೊತೆ ಸಂವಾದ, ಮಧ್ಯಾಹ್ನ 3ಕ್ಕೆ ಹೊಸ ಯಲ್ಲಾಪುರದ ಘಟಕಕ್ಕೆ ಭೇಟಿ ನೀಡಿ ಸಂಜೆ 4ಕ್ಕೆ ಕಲಾಭವನದಲ್ಲಿ ಪೌರ ಕಾರ್ಮಿಕರ ಜೊತೆ ಸಂವಾದ ನಡೆಸಲಿದ್ದಾರೆ. ಜೂ.24ರಂದು ಬೆಳಿಗ್ಗೆ 9ಕ್ಕೆ ಧಾರವಾಡದ ಸಿದ್ದಪ್ಪ ಕಂಬಳಿ ಉದ್ಯಾನದಲ್ಲಿ ಸಸಿ ನೆಡುವುದು, 8 ಗಂಟೆಗೆ ಮರಾಠ ಕಾಲೊನಿ ಸಾರ್ವಜನಿಕ ಸ್ಥಳ ಸ್ವಚ್ಛತೆ, ರಾಯಭಾರಿಗಳಿಂದ ದುರ್ಗಾದೇವಿ ದೇವಸ್ಥಾನ ಹಿಂಭಾಗದ ಕಲ್ಯಾಣಿ ಸ್ವಚ್ಛತೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಪ್ಲಾಸ್ಟಿಕ್ ಪರ್ಯಾಯ ವಸ್ತು ಪ್ರದರ್ಶನ- ಮಾರಾಟ, ಸಂಜೆ 6ಕ್ಕೆ ಕವಿಸಂನಲ್ಲಿ ಸಂಗೀತ ಸಂಜೆ ಜರುಗಲಿದೆ.
ಜೂ. 25 ರಂದು ಬೆಳಗ್ಗೆ 6ಕ್ಕೆ ಹುಬ್ಬಳ್ಳಿ ಚೆನ್ನಮ್ಮ ವೃತ್ತ ಹಾಗೂ ಧಾರವಾಡ ಜ್ಯುಬಿಲಿ ವೃತ್ತದಲ್ಲಿ ಪ್ಲಾಗಥಾನ್ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಹುಬ್ಬಳ್ಳಿಯಲ್ಲಿ ಗೋಡೆ ಬರಹ ಜಾಗೃತಿ ಕಾರ್ಯ ಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.
Kshetra Samachara
21/06/2022 08:49 pm