ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ ಪ್ರಚಾರ ನಡೆಸಲು ಶನಿವಾರ ಕೊನೆಯ ದಿನವಾದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ಗುರಿಕಾರ ಅವರು ಅಬ್ಬರದ ಪ್ರಚಾರ ನಡೆಸಿದರು. ಇವರ ಪ್ರಚಾರ ಕಾರ್ಯಕ್ಕೆ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಗ್ರಾಮಾಂತರ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ್, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ, ಪಾಲಿಕೆ ಸದಸ್ಯ ಡಾ.ಮಯೂರ್ ಮೋರೆ ಸೇರಿದಂತೆ ಅನೇಕರು ಸಾಥ್ ನೀಡಿದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪಬ್ಲಿಕ್ ಹೈಸ್ಕೂಲ್, ಬಾಸೆಲ್ ಮಿಷನ್ ಇಂಗ್ಲಿಷ್ ಮಾಧ್ಯಮ ಹೈಸ್ಕೂಲ್, ಸಿಎಸ್ಐ ಕಾಲೇಜು, ಕಿಟೆಲ್ ಕಾಲೇಜು, ಭಾರತ ಹೈಸ್ಕೂಲ್, ಕೃಷಿ ವಿಶ್ವವಿದ್ಯಾಲಯ, ಪವನ್ ಹೈಸ್ಕೂಲ್, ಅಂಜುಮನ್ ಕಾಲೇಜು, ಹಂಚಿನಮನಿ ಕಾಲೇಜು ಸೇರಿದಂತೆ ಅನೇಕ ಕಡೆಗಳಲ್ಲಿ ಗುರಿಕಾರ ಅವರು ಪ್ರಚಾರ ನಡೆಸಿ, ಶಿಕ್ಷಕ ಮತದಾರರಿಂದ ಮತಯಾಚನೆ ಮಾಡಿದರು.
ಭಾರತ ಹೈಸ್ಕೂಲ್‌ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, 42 ವರ್ಷಗಳಿಂದ ಶಿಕ್ಷಕ ಕ್ಷೇತ್ರವನ್ನು ಪ್ರತಿನಿಧಿಸಿದ ಅಭ್ಯರ್ಥಿ ಶಿಕ್ಷಕರಿಗೆ ಕೇವಲ ಶಿಕ್ಷೆಯನ್ನೇ ನೀಡಿದ್ದಾರೆ. ಶಿಕ್ಷಕ ಮತದಾರರು ಪ್ರಸಕ್ತ ವರ್ಷ ಬದಲಾವಣೆ ಬಯಸಿದ್ದಾರೆ. ಶಿಕ್ಷಕರ ಕಲ್ಯಾಣವಾಗಬೇಕಾದರೆ ಬದಲಾವಣೆಯೊಂದೇ ಮಾರ್ಗವಾಗಿದೆ ಎಂದರು.
ಬಸವರಾಜ ಗುರಿಕಾರ ಮಾತನಾಡಿ, ಪ್ರಸಕ್ತ ವರ್ಷ ಶಿಕ್ಷಕರು ಬದಲಾವಣೆ ಬಯಸಿದ್ದಾರೆ. ಈ ಚುನಾವಣೆಯಲ್ಲಿ ಶಿಕ್ಷಕರು ಆಶೀರ್ವಾದ ಮಾಡಿದ್ದೇ ಆದಲ್ಲಿ ಶಿಕ್ಷಕರ ಸೇವಕನಾಗಿ ಕೆಲಸ ಮಾಡಲಿದ್ದೇನೆ. ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಧ್ವನಿಯಾಗಿ ವಿಧಾನ ಪರಿಷತ್‌ನಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ ಎಂದರು.
Kshetra Samachara
11/06/2022 09:43 pm