ಹುಬ್ಬಳ್ಳಿ: ವಿಧಾನ ಪರಿಷತ್ ನಾಲ್ಕು ಕ್ಷೇತ್ರದ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ, ಈಗಾಗಲೇ ರಾಜ್ಯ ಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅದರಂತೆ ವಿಧಾನ ಪರಿಷತ್ ಚುನಾವಣೆ ಪ್ರಚಾರ ನಡೆಯುತ್ತಿದೆ. ಇಂದು ನಾನು ಕೂಡ ಬೆಳಗಾವಿ, ಹುಬ್ಬಳ್ಳಿಯಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಬಂದಿದ್ದೇನೆ. ಇದುವರೆಗೆ ನಡೆದ ಚುನಾವಣೆ ಪ್ರಚಾರ ನೋಡಿದರೆ ನಮ್ಮ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದರು.
ದೆಹಲಿ ಮತ್ತು ಯು.ಪಿ.ಯಲ್ಲಿ ನಡೆಯುತ್ತಿರುವ ಗಲಾಟೆ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಈಗಾಗಲೇ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳನ್ನು ಕರೆದು ಸಭೆ ಮಾಡಿದ್ದೇನೆ. ಇದೀಗ ರಾಜ್ಯದಲ್ಲಿ ಪರಿಸ್ಥಿತಿ ಶಾಂತವಿದೆ. ಆದರೂ ಜಾಗೃತರಾಗಿರಬೇಕೆಂದು ಸೂಚನೆ ನೀಡಿದ್ದೇವೆ. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಪಿಐಯನ್ನು ಉಸ್ತುವಾರಿ ಮಾಡಲಾಗಿದೆ. ಅವರು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲು ತಿಳಿಸಲಾಗಿದೆ. ಎಲ್ಲ ಸಮುದಾಯದ ನಾಯಕರು ಸೌಹಾರ್ದತೆ ಕಾಪಾಡಬೇಕೆಂದು ತಿಳಿಸಲಾಗಿದೆ ಎಂದರು.
ರಾಜ್ಯದಲ್ಲಿ ಆ್ಯಸಿಡ್ ದಾಳಿ ಹೆಚ್ಚಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ರೂಪಿಸಲು ಕಾನೂನು ಸಚಿವರಿಗೆ ತಿಳಿಸಿದ್ದೇವೆ. ಬರುವ ದಿನಗಳಲ್ಲಿ ಇಂತಹ ಘಟನೆಗಳು ನಡೆಯದ ಹಾಗೇ ನೋಡಿಕೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/06/2022 08:42 am