ಧಾರವಾಡ: ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಜೊತೆ ಜೆಡಿಎಸ್ ಒಪ್ಪಂದ ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದಾದರೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಸಿ ನಮ್ಮ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರಿಗೆ ಪ್ರತ್ಯುತ್ತರ ನೀಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಧಾನ ಮಾಡಿಕೊಳ್ಳುವಂತೆ ಎಚ್ಡಿಕೆ ಆಹ್ವಾನ ಮಾಡಿದ್ದಾರೆ ಎಂಬ ಸುದ್ದಿ ಇದೆ. ಜೆಡಿಎಸ್ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿ ಮಾಡುವುದೇ ಈಗ ಸಂಧಾನ. ಅವರು ನಮಗೆ ಮತ ಹಾಕಬೇಕು ಅದೇ ಸಂಧಾನ. ಹಿಂದೆ ದೇವೇಗೌಡರ ವಿರುದ್ಧ ನಾವು ಅಭ್ಯರ್ಥಿಯನ್ನು ಹಾಕಿರಲಿಲ್ಲ. ಅವರು ಈಗ ಯಾಕೆ ಅಭ್ಯರ್ಥಿಯನ್ನು ಹಾಕಿದ್ದಾರೆ? ಬಿಜೆಪಿ ಸೋಲಿಸೋದೆ ಗುರಿಯಾದ್ರೆ ಜೆಡಿಎಸ್ನವರು ನಮಗೆ ಸಪೋರ್ಟ್ ಮಾಡಲಿ.
ನಮ್ಮ ಪಕ್ಷಕ್ಕೆ ಹೈಕಮಾಂಡ್ ಇದೆ. ಅವರ ಪಕ್ಷಕ್ಕೆ ಇಲ್ಲ. ನಮ್ಮ ಹೈಕಮಾಂಡ್ ಇರೋದು ದೆಹಲಿಯಲ್ಲಿ. ಅವರ ಹೈಕಮಾಂಡ್ ಇರೋದು ಪದ್ಮನಾಭನಗರದಲ್ಲಿ. ರಾಜ್ಯದ ಉಸ್ತುವಾರಿ ಹೇಳಿದಂತೆ ಎರಡನೇ ಅಭ್ಯರ್ಥಿ ಹಾಕಿದ್ದೇವೆ. ಈಗ ಏನೂ ಆಗೋದಿಲ್ಲ. ಏನೇ ಆಗೋದಿದ್ರೂ ಮತದಾನದ ದಿನವೇ ತೀರ್ಮಾನ ಆಗುತ್ತದೆ ಎಂದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಸಾಹಿತಿಗಳು ಅವರ ಫಲಾನುಭವಿಗಳಾಗಿದ್ದರು ಎಂಬ ಅಡ್ಡಂಡ ಕಾರಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪಂಡಿತಾರಾಧ್ಯ ಶ್ರೀ ನಮ್ಮ ಫಲಾನುಭವಿನಾ? ಎಂದು ಪ್ರಶ್ನಿಸಿದರು.
ಪಠ್ಯಕ್ರಮದಲ್ಲಿ ಬಸವಣ್ಣನ ವಿಚಾರವನ್ನು ತಿರುಚಲಾಗಿದೆ. ಅಂಬೇಡ್ಕರ್ ಸೇರಿದಂತೆ ಭಗತ್ ಸಿಂಗ್ ಹಾಗೂ ಕುವೆಂಪು ಅವರ ವಿಚಾರವನ್ನು ತಿರುಚಲಾಗಿದೆ. ಚರಿತ್ರೆಯಲ್ಲಿ ಏನಿದೆಯೋ ಅದನ್ನು ಮುಚ್ಚಿಟ್ಟು ತಿರುಚಲಾಗಿದೆ. ಮಕ್ಕಳಿಗೆ ವೈಚಾರಿಕತೆ ತಿಳಿಸಬೇಕು. ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅನ್ನೋದನ್ನೇ ತೆಗೆದು ಹಾಕಲಾಗಿದೆ.
ಬಸವಣ್ಣ ವೈದಿಕ ಧರ್ಮದ ವಿರುದ್ಧ ಹೋರಾಡಿದ್ದರು. ಅದನ್ನೂ ತಿರುಚಲಾಗಿದೆ. 10 ದಿನದಲ್ಲಿ ಪಠ್ಯ ಪರಿಷ್ಕರಣೆ ಆಗಬೇಕು ಎಂಬುದಕ್ಕೆ ನನ್ನ ಬೆಂಬಲವೂ ಇದೆ. ರೋಹಿತ್ ಚಕ್ರತೀರ್ಥ ಮಾಡಿರೋದನ್ನು ಸಂಪೂರ್ಣ ಹಿಂಪಡೆಯಬೇಕು ಎಂದರು.
ಆರ್ಎಸ್ಎಸ್ ಚಡ್ಡಿ ವಿಚಾರಕ್ಕೆ ಸಂಬಂಧಿಸಿದ ಕೇಳಿದ ಪ್ರಶ್ನೆಗೆ ಗರಂ ಆದ ಸಿದ್ದು, ಚಡ್ಡಿ ವಿಷಯ ಬಿಟ್ಟು ಬಿಡಿ ಚುನಾವಣೆಗೆ ಸಂಬಂಧಿಸಿದ್ದನ್ನಷ್ಟೇ ಕೇಳಿ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/06/2022 05:01 pm