ಧಾರವಾಡ: ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧ ಮಾಡಬೇಕು ಎಂದು ಹೇಳಿ ನೆಹರೂ, ಇಂದಿರಾ ಗಾಂಧಿ ಕೈ ಸುಟ್ಟುಕೊಂಡಿದ್ದರು. ಈಗ ಸಿದ್ದರಾಮಯ್ಯ ಕೂಡ ಆರ್‌ಎಸ್ಎಸ್ ವಿಷಯಕ್ಕೆ ಕೈ ಹಾಕಿದ್ದಾರೆ. ಇದರ ಅರ್ಥ ಕಾಂಗ್ರೆಸ್ ಸುಟ್ಟು ಹೋಗುತ್ತದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳೀನಕುಮಾರ ಕಟೀಲ್ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸಂಘವನ್ನು ರಾಜಕೀಯಕ್ಕೆ ಎಳೆದು ತರುತ್ತಿದ್ದಾರೆ. ಅವರು ಆರ್‌ಎಸ್‌ಎಸ್ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು. ವಿಧಾನ ಪರಿಷತ್‌ನ ನಾಲ್ಕೂ ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ. ಶಿಕ್ಷಕರ ಮೇಲೆ ನಮಗೆ ವಿಶ್ವಾಸ ಇದೆ. ರಾಜ್ಯಸಭೆಯ ಮೂರು ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದರು.
ಹಾಗೇ ಕುಮಾರಸ್ವಾಮಿ ಬಂದಾಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಈ ರೀತಿ ಆಗಬಾರದು. ಎಲ್ಲರೂ ಸಂಯಮದಿಂದ ಇರಬೇಕು. ಬಿಜೆಪಿ ಅವತ್ತು ವಿದ್ಯಾರ್ಥಿಗಳನ್ನು ಕಳುಹಿಸಿಲ್ಲ. ಕುಮಾರಸ್ವಾಮಿ ಅವರ ಈ ಹೇಳಿಕೆ ಸರಿಯಲ್ಲ ಎಂದರು.
ಕುಮಾರಸ್ವಾಮಿ ಬಂದಾಗ ಪಿಎಸ್‌ಐ ಅಭ್ಯರ್ಥಿಗಳು ಮೋದಿ ಎಂದು ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್, ಜೆಡಿಎಸ್‌ನಲ್ಲೂ ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾರೆ. ಅದು ಅವರವರ ವೈಯಕ್ತಿಕ ವಿಚಾರ ಎಂದರು.
Kshetra Samachara
06/06/2022 03:20 pm