ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರು ಶನಿವಾರ ವಾಣಿಜ್ಯನಗರಿ ಹುಬ್ಬಳ್ಳಿಯ ಅನೇಕ ಕಾಲೇಜುಗಳಿಗೆ ಭೇಟಿ ನೀಡಿ ಮತಯಾಚಿಸಿದರು.
ಹುಬ್ಬಳ್ಳಿಯ ಎಸ್.ಆರ್.ಬೊಮ್ಮಾಯಿ ರೋಟರಿ ಹೈಸ್ಕೂಲ್, ಆರ್‌ಎನ್‌ಎಸ್ ವಿದ್ಯಾನಿಕೇತನ ಪ್ರೌಢಶಾಲೆ, ಓರಿಯಂಟಲ್ ಪಬ್ಲಿಕ್ ಸ್ಕೂಲ್, ಅಂಜುಮನ್ ಪಾಲಿಕಟೆಕ್ನಿಕ್ ಕಾಲೇಜು, ಸದ್ಗುರು ಸಿದ್ಧಾರೂಢ ಸ್ವಾಮಿ ಪ್ರೌಢ ಶಾಲೆ, ಬಾಸೆಲ್ ಮಿಷನ್ ಕನ್ನಡ ಪ್ರೌಢಶಾಲೆ, ಎಂ.ಆರ್.ಸಾಕರೆ ಸ್ಟೇಟ್ ಸ್ಕೂಲ್, ಎಸ್.ಟಿ.ಅಂಥೋನಿಸ್ ಪಬ್ಲಿಕ್ ಹೈಸ್ಕೂಲ್ ಸೇರಿದಂತೆ ಅನೇಕ ಕಡೆಗಳಲ್ಲಿ ಗುರಿಕಾರ ಅವರು ಅಬ್ಬರದ ಪ್ರಚಾರ ನಡೆಸಿದರು.
ವಿದ್ಯಾಕಾಶಿ ಧಾರವಾಡ ನಗರದಲ್ಲಿ ಪ್ರಚಾರ ನಡೆಸಿದ ನಂತರ ವಾಣಿಜ್ಯನಗರಿ ಹುಬ್ಬಳ್ಳಿಯತ್ತ ಗುರಿ ನೆಟ್ಟ ಗುರಿಕಾರ ಅವರು ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರಿಂದ ಮತಯಾಚನೆ ಮಾಡಿ, ಪ್ರಸಕ್ತ ವರ್ಷದ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಿ, ಶಿಕ್ಷಕರ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಬಸವರಾಜ ಗುರಿಕಾರ ಅವರ ಪರವಾಗಿ ನಾಲ್ಕೂ ಜಿಲ್ಲೆಗಳಲ್ಲಿ ಬೇರೆ ಬೇರೆ ತಂಡಗಳು ಪ್ರಚಾರ ನಡೆಸುತ್ತಿದ್ದು, ಈ ವರ್ಷದ ಚುನಾವಣೆಯಲ್ಲಿ ಗುರಿಕಾರ ಅವರನ್ನೇ ಬೆಂಬಲಿಸುವಂತೆ ಮನವಿ ಮಾಡುತ್ತಿವೆ. ಇತ್ತ ಸ್ವತಃ ಗುರಿಕಾರ ಅವರೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಪ್ರತಿಯೊಬ್ಬ ಶಿಕ್ಷಕರಿಂದಲೂ ಮತಯಾಚನೆ ಮಾಡುತ್ತಿದ್ದಾರೆ.
ಧಾರವಾಡ ಹಾಗೂ ಹುಬ್ಬಳ್ಳಿಯಲ್ಲೂ ಗುರಿಕಾರ ಅವರಿಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಈ ಚುನಾವಣೆಯಲ್ಲಿ ಗುರಿಕಾರ ಅವರ ಗೆಲುವು ನಿಶ್ಚಿತ ಎಂದೇ ಹೇಳಲಾಗುತ್ತಿದೆ. ಹಾವೇರಿ, ಗದಗ, ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಗಳನ್ನೊಳಗೊಂಡು ಈ ಚುನಾವಣೆ ನಡೆಯುತ್ತಿದ್ದು, ನಾಲ್ಕೂ ಜಿಲ್ಲೆಗಳಲ್ಲಿ ಗುರಿಕಾರ ಅವರಿಗೆ ಶಿಕ್ಷಕರಿಂದ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿದೆ.
Kshetra Samachara
04/06/2022 10:27 pm