ಧಾರವಾಡ: ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ, ಹುದ್ದೆ ಪದನಾಮ ಬದಲಾವಣೆ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿಗೆ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಬೆಂಬಲ ಸೂಚಿಸಿದರು.
ಈ ವೇಳೆ ಅತಿಥಿ ಉಪನ್ಯಾಸಕರನ್ನುದ್ದೇಶಿಸಿ ಮಾತನಾಡಿದ ಗುರಿಕಾರ, ಉಪನ್ಯಾಸಕರು ಕೇಳುತ್ತಿರುವ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಮೊದಲು ಈ ಅತಿಥಿ ಎಂಬ ಪದವನ್ನೇ ತೆಗೆದು ಹಾಕಬೇಕಿದೆ. ಉಪಕುಲಪತಿಗಳಿಗೆ ಅತಿಥಿ ಉಪಕುಲಪತಿಗಳು ಹಾಗೂ ಕುಲಸಚಿವರಿಗೆ ಅತಿಥಿ ಕುಲಸಚಿವರು ಎನ್ನಬೇಕು. ಏಕೆಂದರೆ ಅವರೇ ಆಗಾಗ ಬದಲಾವಣೆಯಾಗುತ್ತಿರುತ್ತಾರೆ. ಆದರೆ, ಉಪನ್ಯಾಸಕರು ಎಷ್ಟೇ ವರ್ಷ ಕಳೆದರೂ ಇಲ್ಲಿಯೇ ಕೆಲಸ ಮಾಡುತ್ತಿರುತ್ತಾರೆ ಹೀಗಿರುವಾಗ ಈ ಉಪನ್ಯಾಸಕರಿಗೆ ಅತಿಥಿ ಉಪನ್ಯಾಸಕರು ಎಂದು ಏಕೆ ಹೇಳಬೇಕು ಎಂದು ಪ್ರಶ್ನಿಸಿದರು.
ಉಪನ್ಯಾಸಕರು ನಡೆಸುತ್ತಿರುವ ಈ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಎರಡು ದಿನಗಳ ಹಿಂದೆಯೇ ನಾನು ಈ ಪ್ರತಿಭಟನೆಗೆ ಬೆಂಬಲ ಸೂಚಿಸಬೇಕಿತ್ತು. ಆದರೆ, ಪ್ರಚಾರಾರ್ಥ ಬೇರೆ ಜಿಲ್ಲೆಯಲ್ಲಿ ಇದ್ದಿದ್ರಿಂದ ತಡವಾಗಿದೆ ಎಂದರು.
Kshetra Samachara
03/06/2022 02:14 pm