ಧಾರವಾಡ: ಪಿಎಸ್ ಐ ಅಕ್ರಮ ನೇಮಕಾತಿ ವಿಷಯದಲ್ಲಿ ತಮ್ಮ ಬಳಿ ಸಾಕಷ್ಟು ಸಾಕ್ಷಿಗಳಿವೆ ಎಂದು ಹೇಳುವ ಪ್ರಿಯಾಂಕ ಖರ್ಗೆ ಅವರು ತನಿಖಾಧಿಕಾರಿಗಳ ಮುಂದೆ ಏಕೆ ಹಾಜರಾಗಲಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್ಐ ನೇಮಕಾತಿಯ ಅಕ್ರಮದಲ್ಲಿ ಪಾಲ್ಗೊಂಡ ನಮ್ಮ ಪಕ್ಷದ ಕೆಲ ಕಾರ್ಯಕರ್ತರನ್ನು ಮುಲಾಜಿಲ್ಲದೇ ಒಳಗಡೆ ಹಾಕಲಾಗಿದೆ. ಪ್ರಿಯಾಂಕ ಖರ್ಗೆ ಅವರು ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಎಲ್ಲದರ ಬಗ್ಗೆ ವಿವರಣೆ ನೀಡಬೇಕಿತ್ತು ಎಂದರು.
ನಮ್ಮ ಬಿಜೆಪಿ ಸರ್ಕಾರ ಶೇ.40 ಸರ್ಕಾರ ಎನ್ನುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಆಧಾರ, ಸಾಕ್ಷಿ ಇಲ್ಲದೇ ಆರೋಪ ಮಾಡಬಾರದು. ಈಶ್ವರಪ್ಪನವರು ಸ್ವಯಂ ಪ್ರೇರಣೆಯಿಂದ ಪಕ್ಷಕ್ಕೆ ಮುಜುಗರ ಆಗಬಾರದು ಎಂದು ರಾಜೀನಾಮೆ ಕೊಟ್ಟಿದ್ದಾರೆ. ನಂತರ ತನಿಖೆ ಎದುರಿಸುತ್ತೇನೆ ಎಂದಿದ್ದಾರೆ. ಸಂತೋಷ ಪಾಟೀಲ ಆತ್ಮಹತ್ಯೆಗೂ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದರು.
ಬಸನಗೌಡ ಪಾಟೀಲ ಯತ್ನಾಳ ಅವರ ಬಗ್ಗೆ ನಮ್ಮ ಪಕ್ಷದ ನಾಯಕರುಗಳು ಸೂಕ್ತವಾದ ಸಮಯದಲ್ಲಿ ಸೂಕ್ತವಾದ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಬೆಲೆ ಏರಿಕೆ ಬಗ್ಗೆ ನರೇಂದ್ರ ಮೋದಿ ಸರ್ಕಾರ ಬರುವ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಜನಪರ ಆಡಳಿತ ನೀಡುತ್ತದೆ. ಮೋದಿ ಅವರು 35 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಕೊಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ರಷ್ಯಾ, ಉಕ್ರೇನ್ ದೇಶಗಳ ಮಧ್ಯದ ಯುದ್ಧದಿಂದಾಗಿ ಪೆಟ್ರೋಲ್ ದರ ಹೆಚ್ಚಾಗಿತ್ತು. ಆದರೂ ಜನರ ಮೇಲಿನ ಹೊರೆಯನ್ನು ಮೋದಿ ಇಳಿಸಿದ್ದಾರೆ ಎಂದರು.
ಧಾರವಾಡದವರೇ ಇದೀಗ ಪಾಲಿಕೆ ಮೇಯರ್ ಆಗಿದ್ದು, ಬರುವ ಒಂದು ವರ್ಷದ ಅವಧಿಯಲ್ಲಿ ಅವರು ಧಾರವಾಡವನ್ನು ಬದಲಾವಣೆ ಮಾಡುತ್ತಾರೆ ಎಂದು ಟೆಂಗಿನಕಾಯಿ, ಬರುವ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.
Kshetra Samachara
02/06/2022 03:58 pm