ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರ ಪರವಾಗಿ ಅವರ ಬೆಂಬಲಿಗರು ಸೋಮವಾರ ಧಾರವಾಡ ಜಿಲ್ಲೆಯ ವಿವಿಧೆಡೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಪ್ರಚಾರದ ಸಂದರ್ಭದಲ್ಲಿ ಎಂ.ಟಿ.ದಳವಾಯಿ ಮಾತನಾಡಿ, ಶಿಕ್ಷಕರ ಮುಖಂಡ ಬಸವರಾಜ ಗುರಿಕಾರ ಅವರು ಶಿಕ್ಷಕರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಶಿಕ್ಷಕರ ಸಂಘವನ್ನು ಕಟ್ಟಿ ಅದರ ಮೂಲಕ 1981ರಲ್ಲಿ 482 ಶಿಕ್ಷಕರ ನೇಮಕಾತಿ ಆದೇಶ ಮಾಡಿಸಿದ್ದಲ್ಲದೇ, ವಯೋಮಿತಿ ಆಧಾರದ ಮೇಲೆ ಶಿಕ್ಷಕರ ನೇಮಕಾತಿಗೆ ಶ್ರಮಿಸಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟರು.
ಅಲ್ಲದೇ 5ನೇ ವೇತನ ಆಯೋಗದ ವರದಿ ಪ್ರಕಾರ ಎಲ್ಲ ಶಿಕ್ಷಕರಿಗೆ ವಿಶೇಷ ವೇತನ ಮಂಜೂರು ಮಾಡಿಸಿ, 6ನೇ ವೇತನ ಆಯೋಗದಲ್ಲಿ ವಿಶೇಷ ವೇತನ ಮೂಲ ವೇತನದಲ್ಲಿ ವಿಲಿನಗೊಳಿಸಲು ಪ್ರಯತ್ನಿಸಿದ್ದರಿಂದ ಎಲ್ಲರಿಗೂ ಹೆಚ್ಚುವರಿಯಾಗಿ ವೇತನ ಬಡ್ತಿಗಳು ದೊರೆಯುವಂತಾಯಿತು. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಬಸವರಾಜ ಗುರಿಕಾರ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಅವರ ಗೆಲುವಿಗೆ ಕೈಜೋಡಿಸುವುದಷ್ಟೇ ಅಲ್ಲದೇ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೂ ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದರು.
ಆನಂದ ಕುಲಕರ್ಣಿ ಮಾತನಾಡಿ, ವೇತನ ಆಯೋಗಗಳಿಂದ ಎರಡು ರೀತಿಯ ಆರ್ಥಿಕ ಸೌಲಭ್ಯ ಕೊಡಿಸುವಲ್ಲಿ ಸಫಲತೆ ಕಂಡಿದ್ದಾರೆ. ಸಿ ವಲಯದಲ್ಲಿ ಹುದ್ದೆ ಖಾಲಿ ಇಲ್ಲದಿದ್ದಾಗ ಎ, ಬಿ ವಲಯದ ಹುದ್ದೆಗಳಿಗೆ ವರ್ಗಾವಣೆ ಹೊಂದುವ ಆದೇಶ ಮಾಡಿಸಿದ್ದು, ಬಡ್ತಿ ಪಡೆದ ಶಿಕ್ಷಕರಿಗೆ 10,15,20,25,30 ವರ್ಷದ ಆರ್ಥಿಕ ಸೌಲಭ್ಯ ನೀಡುವಂತೆ 6ನೇ ವೇತನ ಆಯೋಗದಿಂದ ಶಿಫಾರಸ್ಸು ಮಾಡಿಸಿದ ಕೀರ್ತಿ ಗುರಿಕಾರ ಅವರಿಗೆ ಸಲ್ಲುತ್ತದೆ ಎಂದರು.
ಈಗಾಗಲೇ ಅಧಿಕಾರವಿಲ್ಲದೇ ಕೇವಲ ಶಿಕ್ಷಕರ ಸಹಕಾರ, ಬೆಂಬಲದಿಂದ ಇಷ್ಟೊಂದು ಕೆಲಸವನ್ನು ಶಿಕ್ಷಕರ ಕ್ಷೇತ್ರದಲ್ಲಿ ಮಾಡಿರುವ ಬಸವರಾಜ ಗುರಿಕಾರ ಅವರಿಗೆ ಅಧಿಕಾರ ದೊರೆತರೆ ಇನ್ನೆಷ್ಟು ಕೆಲಸ ಮಾಡಬಹುದು. ಅಲ್ಲದೇ ಪ್ರತಿ ಸಮಯದಲ್ಲಿಯೂ ಶಿಕ್ಷಕರ ಪರವಾಗಿಯೇ ಇರುವ ನಾಯಕರನ್ನು ಆಯ್ಕೆ ಮಾಡಬೇಕಾದದ್ದು ನಮ್ಮ ಜವಾಬ್ದಾರಿಯಾಗಿದ್ದು, ಗುರಿಕಾರ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಗೋವನಕೊಪ್ಪ ಗ್ರಾಮದ ಎಂ.ವೈ.ನಲವಾಡಿ ಪ್ರೌಢ ಶಾಲೆ, ಸೋಮಾಪುರದ ಭಾರತಿ ವಿಶ್ವ ಸದನ ಪ್ರೌಢ ಶಾಲೆ, ಹೆಬ್ಬಳ್ಳಿಯ ಸರ್ಕಾರಿ ಪ್ರೌಢ ಶಾಲೆ, ತಿಮ್ಮಾಪುರದ ಮುರಾರ್ಜಿ ವಸತಿ ಶಾಲೆ, ಶಿವಳ್ಳಿಯ ಸರ್ಕಾರಿ ಪ್ರೌಢ ಶಾಲೆ, ಸುಳ್ಳ ಗ್ರಾಮದ ಶಿವಾನಂದ ಭಾರತಿ ಪ್ರೌಢ ಶಾಲೆ, ಬ್ಯಾಹಟ್ಟಿಯ ಪರಪ್ಪ ಮಾಸೆಪ್ಪರೋಗಿ ಪ್ರೌಢ ಶಾಲೆ, ಕುಸುಗಲ್‍ನ ಸರ್ಕಾರಿ ಪ್ರೌಢ ಶಾಲೆ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮತದಾರರಲ್ಲಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಜಿ.ಎನ್. ಸೊಪ್ಪಿನ, ಬಸವರಾಜ ಲಿಂಗದಳ್ಳಿ, ಭೀಮಣ್ಣ ಹೊನಕೇರಿ ಸೇರಿದಂತೆ ಇತರರು ಇದ್ದರು. ಅದೇ ರೀತಿ ನವಲಗುಂದದ ಶಂಕರ ಪದವಿಪೂರ್ವ ಕಾಲೇಜು ಸೇರಿದಂತೆ ವಿವಿಧೆಡೆಗಳಲ್ಲಿ ಪ್ರೊ.ಎಸ್.ಎಸ್.ದೊಡಮನಿ, ಪ್ರೊ.ಎನ್.ಬಿ.ಕಂಬಳಿ, ಪ್ರೊ. ಹೂಗಾರ, ಶಿಕ್ಷಕರಾದ ಬಿ.ಎ. ರಂಗಣ್ಣವರ, ಪ್ರಾಚಾರ್ಯ ಲಮಾಣಿ, ಪ್ರೊ.ಎಸ್.ಎ. ಪಾಟೀಲ ಪ್ರಚಾರ ಕೈಗೊಂಡರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/05/2022 10:23 pm