ಧಾರವಾಡ: ಬಸವರಾಜ ಹೊರಟ್ಟಿ ಅವರು ಅಧಿಕಾರ ದಾಹದಿಂದ ಮತ್ತೆ ಸಭಾಪತಿ ಆಗಬೇಕು ಎಂಬ ಆಸೆಯಿಂದ ಬಿಜೆಪಿ ಸೇರಿದ್ದಾರೆ. ಸೋಲಿನ ಭಯದಿಂದ ಹೊರಟ್ಟಿ ಅವರು ಬಿಜೆಪಿ ಸೇರಿದ್ದಾರೆ ಎಂಬ ಸಂದೇಶ ಈಗಾಗಲೇ ಶಿಕ್ಷಕರಿಗೆ ಹೋಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ಬಾರಿ ಸೆಕ್ಯುಲರಿ ಪಾರ್ಟಿಯಿಂದ ಹೊರಟ್ಟಿ ಸ್ಪರ್ಧೆ ಮಾಡಿದ್ದರಿಂದ ಜ್ಯಾತ್ಯಾತೀತ ಮತಗಳು ಅವರಿಗೆ ಹೋಗಿದ್ದವು. ಆದರೆ, ಪ್ರಸಕ್ತ ವರ್ಷ ಶಿಕ್ಷಕರು ಬದಲಾವಣೆ ಬಯಸಿದ್ದಾರೆ. ಕಳೆದ 40 ವರ್ಷಗಳಿಂದ ಶಿಕ್ಷಕರ ಕ್ಷೇತ್ರದಲ್ಲಿ ಗುರಿಕಾರ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅವರ ಮೇಲೆ ಯಾವುದೇ ಕಳಂಕ ಇಲ್ಲ. ಬಿಜೆಪಿಯಿಂದ ಶಿಕ್ಷಕರು ಭ್ರಮನಿರಸರಾಗಿದ್ದಾರೆ. ಯಾತಕ್ಕಾಗಿ ಬಿಜೆಪಿಗೆ ಮತ ಹಾಕಬೇಕು ಎಂಬ ಪ್ರಶ್ನೆ ಅವರಲ್ಲಿ ಮೂಡಿದೆ. ಬೆಲೆ ಏರಿಕೆ, ಭ್ರಷ್ಟಾಚಾರ ಅಥವಾ ಜನ ವಿಶ್ವಾಸ ಇಲ್ಲದ ಪಕ್ಷಕ್ಕೆ ಮತ ಹಾಕಬೇಕಾ ಎಂಬ ಹಲವಾರು ಪ್ರಶ್ನೆಗಳು ಶಿಕ್ಷಕರ ತಲೆಯಲ್ಲಿವೆ ಎಂದರು.
ಕಳೆದ ಎರಡು ವರ್ಷಗಳಿಂದ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶಿಕ್ಷಕರ ನೇಮಕಾತಿ, ಪೊಲೀಸ್ ನೇಮಕಾತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಇದನ್ನೆಲ್ಲ ಶಿಕ್ಷಕರು ಅರ್ಥ ಮಾಡಿಕೊಳ್ಳುತ್ತಾರೆ. ಈ ಬಾರಿ ಗುರಿಕಾರ ಅವರು ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/05/2022 01:56 pm