ಧಾರವಾಡ: ಅದು 1994ರ ವಾಹನ. ಆ ವಾಹನ ಎಂದರೆ ಅವರಿಗೆ ಅಚ್ಚುಮೆಚ್ಚು. ಅಲ್ಲದೇ ಅದು ಅವರಿಗೆ ಲಕ್ಕಿ ವಾಹನವಂತೆ. ಹೀಗಾಗಿ ಐಷಾರಾಮಿ ವಾಹನ ಬಿಟ್ಟು ಇಂದು ಅಂಬಾಸೆಡರ್ ವಾಹನ ಏರಿದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಜಿಲ್ಲಾಧಿಕಾರಿ ಕಚೇರಿಗೆ ಬಂದು ಎಂಟನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಈಗಾಗಲೇ ಏಳು ಬಾರಿ ಜಯಭೇರಿ ಬಾರಿಸಿರುವ ಹೊರಟ್ಟಿ ಇಂದು ಎಂಟನೇ ಬಾರಿಗೆ ತಮ್ಮ ಪತ್ನಿ ಸಮೇತ ಬಂದು ಜಿಲ್ಲಾ ಚುನುವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಇಲ್ಲಿ ಪ್ರಮುಖವಾಗಿ ಗಮನಸೆಳೆದಿದ್ದು, ಬಸವರಾಜ ಹೊರಟ್ಟಿ ಅವರ ಅಚ್ಚುಮೆಚ್ಚಿನ ಅಂಬಾಸೆಡರ್ ವಾಹನ. ಪತ್ನಿ ಸಮೇತ ಅದೇ ವಾಹನದಲ್ಲಿ ಬಂದ ಹೊರಟ್ಟಿ, ನಾಮಪತ್ರ ಸಲ್ಲಿಸಿದ ಬಳಿಕವೂ ಅದೇ ವಾಹನದಲ್ಲಿ ತೆರಳಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಇದುವರೆಗೂ ಸತತ ಏಳು ಬಾರಿ ಯಾರೂ ಗೆದ್ದಿಲ್ಲ. ಎಂಟನೇ ಬಾರಿಗೆ ಗೆಲ್ಲಿಸಿ ಹ್ಯಾಟ್ರಿಕ್ ಮಾಡಬೇಕು ಎಂದು ಶಿಕ್ಷಕರ ಪಣ ತೊಟ್ಟಿದ್ದಾರೆ ಎಂದರು.
ಹೊರಟ್ಟಿ ಅವರ ನಾಮಪತ್ರ ಸಲ್ಲಿಕೆಗೆ ಅನೇಕ ಶಿಕ್ಷಕರು ಸಾಕ್ಷಿಯಾದರು. ಹೊರಟ್ಟಿ ಅವರು ಎರಡು ಸೆಟ್ಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಮೊದಲ ಪ್ರತಿ ನಾಮಪತ್ರ ಸಲ್ಲಿಸುವಾಗ ಪತ್ನಿ ಹೇಮಲತಾ ಹೊರಟ್ಟಿ ಹಾಗೂ ಎನ್.ಎನ್.ಸವಣೂರ ಇದ್ದರು.
ಎರಡನೇ ಪ್ರತಿ ನಾಮಪತ್ರ ಸಲ್ಲಿಸುವಾಗ ವಿ.ಎಸ್.ಹುದ್ದಾರ, ಶ್ಯಾಮ ಮಲ್ಲನಗೌಡರ ಜೊತೆಗಿದ್ದರು. ಮೇ.26 ರಂದು ಹೊರಟ್ಟಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ನಾಮಪತ್ರ ಸಲ್ಲಿಕೆ ವೇಳೆ ಹಾಜರಿರಲಿದ್ದಾರೆ.
Kshetra Samachara
24/05/2022 03:20 pm