ಹುಬ್ಬಳ್ಳಿ: ಮಹದಾಯಿ ಯೋಜನೆ ಶೀಘ್ರವಾಗಿ ಕಾರ್ಯರೂಪಕ್ಕೆ ಬರಬೇಕೆಂದು ಹಲವಾರು ರೈತಪರ ಸಂಘಟನೆಗಳು ಹೋರಾಟ ಮಾಡುತ್ತಾ ಬರುತ್ತಿವೆ. ಆದರೆ, ರಾಜಕೀಯ ಮುಖಂಡರು ನ್ಯಾಯಾಧೀಶರ ತೀರ್ಪನ್ನು ಸರಿಯಾಗಿ ಗ್ರಹಿಸದೇ ಅದು ಸರ್ವೋಚ್ಚ ನ್ಯಾಯಾಲಯದಲ್ಲಿದೆ ಎಂದು ಸುಳ್ಳು ಹೇಳಿ ರಾಜ್ಯದ ಜನರಿಗೆ ತಪ್ಪು ಸಂದೇಶ ಕೊಡುತ್ತಿದ್ದಾರೆ ಎಂದು ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಹರಿಹಾಯ್ದರು.
ನಗರದಲ್ಲಿಂದು ಮಾತನಾಡಿದ ಅವರು, ಕಬರಗೇಡಿ ರಾಜಕಾರಣಿಗಳು ಉತ್ತರ ಕರ್ನಾಟಕದ ಬಗ್ಗೆ ಏನೂ ಅರಿಯದೇ ಮಹದಾಯಿ ಯೋಜನೆಗೆ ಕಾನೂನು ತೊಡಕು ಇದೆ ಎಂದು ಹೇಳುತ್ತಾ ಸಂವಿಧಾನ ಮತ್ತು ಕಾನೂನಿನ ವಿರುದ್ಧ ಹೇಳಿಕೆಯನ್ನು ಕೊಡುತ್ತಿದ್ದಾರೆ. ನ್ಯಾಯಾಧೀಕರಣ ತೀರ್ಪು ಕೊಟ್ಟಂತೆ 4 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಸಿಡಬ್ಲೂ ಸಿ ಪರವಾನಗಿ ಮುಖ್ಯವಾಗಿದೆ.
ಈ ವಿಷಯಕ್ಕೆ ಸಂಬಂಧಿಸಿ ಫಾರೆಸ್ಟ್ ಕ್ಲಿಯರೆನ್ಸ್ ಕೊಡುವುದು ಬೆಳಗಾವಿಯ ಜಿಲ್ಲಾಧಿಕಾರಿಗಳ ಕೈಯಲ್ಲಿದೆ. ಅವರು ಕೂಡಲೇ ಸಿಡಬ್ಲೂಸಿ ಪರವಾನಗಿ ಸಂಬಂಧಿಸಿದ ದಾಖಲೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ವರದಿ ಮಾಡಲು ಒತ್ತಾಯದ ಜೊತೆಗೆ ನಿರ್ದೇಶನ ನೀಡುವುದನ್ನು ಬಿಟ್ಟು, ಜನರ ಗಮನವನ್ನು ಬೇರೆ ಕಡೆಗೆ ಸೆಳೆದುಕೊಂಡು ಹೋಗುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
Kshetra Samachara
21/05/2022 03:47 pm